Saturday, December 4, 2010

ಮಾಗಿಯ ಚಿತ್ರಗಳು ಹಾಗೂ ಸಾಲುಗಳು

ಮಳೆಗಾಲ ಮುಗಿದು ಇದೀಗ ಮಾಗಿಯ ಕಾಲ ಬಂದಾಗಿದೆ. ಬದಲಾಗುತ್ತಲೇ ಇರುವ ಪ್ರಕೃತಿ, ಅದರ ಸೌಂದರ್ಯವನ್ನು ಅನುಭವಿಸಿಯೇ ನೋಡಬೇಕು. ಈ ಮಾಗಿಯ ಕಾಲವೇ ಹೀಗೆ ಒಣಗಾಳಿ, ಮುಂಜಾನೆಯ ಮಂಜು, ಇಬ್ಬನಿ, ಒಡೆಯುವ ಕಾಲ ಹಿಮ್ಮಡಿ ,ಬಾನಲ್ಲಿ ಚಿಂದಿ ಚಿಂದಿ ಮೋಡಗಳ ಜಾತ್ರೆ, ತಡವಾಗಿ ಉದಯಿಸುವ ಸೂರ್ಯ, ಶರತ್ಕಾಲದ ಬೆಳದಿಂಗಳು, ಕಾಡು ಹೂಗಳು, ಅದರ ಪರಿಮಳ, ಹಳದಿ ಎಳೆಗಳು, ಪಶ್ಚಿಮದ ಸೂರ್ಯ ಪಡುವಣದ ಮನೆಯನ್ನು ತಲುಪಿದೊಡನೆ ಒಕಳಿಯಾಡುವ ಮೋಡಗಳು ,ಜೇನ್ಮಳೆಯಂತೆ ಸುರಿಯುವ ಬೆಳದಿಂಗಳು ಹೀಗೆ ಮಾಗಿಯ ಜೈತ್ರ ಯಾತ್ರೆ ಮುಂದುವರಿಯುತ್ತದೆ.


ಮೊನ್ನೆ ಹೊಳೆದಂಡೆಯಂಚಿನಲಿ ಹೋಗಿ ಕುಳಿತಿದ್ದಾಗ,ರಾತ್ರಿ ಆರಾಮ ಕುರ್ಚಿಯಲಿ ಕುಳಿತು ಬೆಳದಿಂಗಳನು ಸವಿಯುತ್ತಿದ್ದಾಗ ಕೆಲವು ಸಾಲುಗಳು ಹಾದು ಹೋದವು. ಕೆಲವು ಸಾಲುಗಳು ಮಾಗಿಯ ಮೂಡಣದ ಗಾಳಿಗೆ ಉದುರುವ ಹಾರಾಡುವ ತರಗೆಲೆಗಳಂತೆ ಕಾಣಬಹುದು. ಹಾಗೆ ನಾನು ಸೆರೆ ಹಿಡಿದ ಮಾಗಿಯ ಕೆಲವು ಚಿತ್ರಗಳನ್ನೂ ಹಾಕಿದ್ದೇನೆ ಓದಿ ನೋಡಿ ಹೇಗಿದೆ ಹೇಳಿ.















**ಬಾನಲ್ಲಿ ಬಿಳಿಯ ಮೋಡಗಳ ಮೆರವಣಿಗೆ. ಕ್ಷಣಕ್ಕೂ ಬದಲಾಗುವ ಚಿತ್ರಪಟಗಳು.


**ತಿಳಿನೀರ ಹೊಳೆಯಲ್ಲಿ ತನ್ನ ಬಿಂಬವ ನೋಡಿ ಮುಗುಳುನಗುತ್ತಾ ಸಾಗುವ ಹಾಯಿದೋಣಿಗೆ ತೀರವ ಸೇರುವ ಹಂಬಲ.


**ಹಗಲಲ್ಲಿ ಯಾರೋ ಹತ್ತಿಯ ಮೂಟೆಯನ್ನು ಬಾನಿಗೆಸೆದಂತೆ ಚೆಲ್ಲಾಪಿಲ್ಲಿ ಮೋಡಗಳು. ಅದೇ ಆಗಸವು ರಾತ್ರಿಯಾಗುತ್ತಿದ್ದಂತೆ ಅಲೆಗಳ ಅಬ್ಬರವೇ ಇಲ್ಲದ ಶಾಂತ ಸಮುದ್ರ.

**ಇನ್ನೆರಡು ದಿನಗಳಲಿ ಭೂಮಿಗೆ ಬೀಳಲಿರುವ ಹಳದಿ ಎಲೆಯೊಂದಕ್ಕೆ ಬಂಗಾರದ ಬಣ್ಣ ಬಳಿದ ಸಂಭ್ರಮದಲ್ಲಿದ್ದ ಸೂರ್ಯ.


**ಮುಂಜಾವಿನ ಹೊಂಬಿಸಿಲಿಗೆ ವಜ್ರದ ಹರಳುಗಳಂತೆ ಹೊಳೆವ, ಜೇಡರ ಬಲೆಯ ಮೇಲಿನ ಇಬ್ಬನಿ ಹನಿಗಳು.


**ಯಾವುದೊ ಒಬ್ಬ fashion designerನ ಹೊಸ ಸೀರೆಯ ವಿನ್ಯಾಸದಂತೆ ಕಾಣುವ ಬಾನಿಗೆ ಮೋಡ ಹಾಗೂ ನಕ್ಷತ್ರಗಳ ಕಸೂತಿ, ಚಂದಿರನ ಬೆಳದಿಂಗಳ ಜರತಾರಿ.


**ಬಾನಲ್ಲಿ ಮಿನುಗುತ್ತ ಸಾಗಿದ ವಿಮಾನವೊಂದರ ಕಂಡ ಹುಡುಗಿಯೊಬ್ಬಳು ಸ್ತ್ರೀ ವಿಮೋಚನೆಯ ಕವನ ಬರೆದಳು. ವಿಮಾನದ ಗಗನಸಖಿಯ ಕಣ್ಣ ಹನಿ ಕರಗಿ ಕೆನ್ನೆಯ ಮೇಲೆ ಕರೆಯಷ್ಟೇ ಉಳಿದಿತ್ತು.


**ನಕ್ಷತ್ರಗಳ ಮೀರುವ ಹಂಬಲದಲ್ಲಿದ್ದವಳಿಗೆ ಅವಳ ಪ್ರೀತಿ ಉಲ್ಕೆಯಾಗಿ ಉರಿದದ್ದು ತಿಳಿಯಲೇ ಇಲ್ಲ .


**ಹುಡುಗನ ಭುಜಕ್ಕೊರಗಿ ಕುಳಿತ ಹುಡುಗಿಯ ಕಂಡ ಬಾನ ಚಂದಿರ ರೋಹಿಣಿಯ ನೋಡಿ ಮುಗುಳ್ನಕ್ಕ !


**ರಾತ್ರಿಯಲಿ ಮಿನುಗುತ್ತ ಹೊರಟ ವಿಮಾನವೊಂದರ ಕಂಡ ಮೋಡದ ಮರೆಯಲ್ಲಿನ ಚುಕ್ಕಿಯ ಹೊಟ್ಟೆಯೊಳಗೆ ತಣ್ಣನೆಯ ಹೊಟ್ಟೆಕಿಚ್ಚು.


**ಹುಣ್ಣಿಮೆಯ ಚಂದಿರನಲ್ಲಿ ಹುಡುಗಿಯ ಮೊಗ ಕಂಡವನಿಗೆ, ಅಮಾವಾಸ್ಯೆಯ ರಾತ್ರಿ ಆಕೆಯ ಸೆರಗಿನ ಜರತಾರಿ ಕಸೂತಿಯಂತೆ ಕಂಡಿತು.
**ರಾತ್ರಿ ಕಣ್ಣು ಬಿಟ್ಟಾಗಲೆಲ್ಲ ರಸ್ತೆಯ ದೀಪದಂತೆ ಇಣುಕುವ ನಿನ್ನ ನೆನಪುಗಳು..


**ನಿನ್ನ ನೆನಪುಗಳನ್ನು ಬಾನಿಗೆ ಎಸೆದೆ ಚುಕ್ಕಿಗಳಾಗಿ ನನ್ನ ಕಾಡತೊಡಗಿದವು ..


**ನಿನ್ನೆ ಬಿದ್ದ ನಿನ್ನ ಕನಸುಗಳ ಮಳೆಗೆ ನೆನಪುಗಳು ಹಸಿರಾಗಿ ಬಿಟ್ಟಿವೆ.


**ಗಿಡದ ಎಲೆಗಳನ್ನು, ತಾರಸಿಯ ಮೇಲಿನ ಬಟ್ಟೆಗಳನ್ನು ಹಾರಿಸಿಕೊಂಡು ಹೋಗುವ ಮೂಡಣದ ಗಾಳಿಗೆ ನಿನ್ನ ನೆನಪನ್ನು ಮಾತ್ರ ಅಲ್ಲಾಡಿಸುವ ತಾಕತ್ತು ಇಲ್ಲ.


**ನಿನ್ನ ಕಣ್ಣಲ್ಲಿ ತಾರೆಗಳು ಮಿನುಗುತ್ತವೆ, ನಿನ್ನ ನಗೆಗೆ ಕಾಮನಬಿಲ್ಲಿನ ಬಣ್ಣಗಳು, ಮೊಗವು ಚಂದಿರನಂತೆ, ಒಟ್ಟಿನಲ್ಲಿ ನೀನು ಬಾಂದಳದ ಬೆಡಗಿ ಆಗಸದ ಹುಡುಗಿ, ಮಳೆಯಾಗಿ ಸುರಿದರೆ ಮಾತ್ರ ನನ್ನ ಬೊಗಸೆಯಲ್ಲಿ ಬಂಧಿ.

**ಅದ್ಯಾರದ್ದೋ ಮನೆಯ ಸೋರುವ ನಲ್ಲಿಯಲ್ಲಿ ನೀರು ಹನಿಯುವ ಶಬ್ದವ ಹುಡುಕುತ್ತ ಹೊರಟಂತಿದ್ದಾನೆ ಬಾನಲ್ಲಿ ಚಂದಿರ.

**ರಾತ್ರಿ ಬಾಂದಳದಿ ಮಿನುಗುವ ತಾರೆಗಳೇ ನಿಮಗೂ ಆಗುವುದಿಲ್ಲವೇ ಛಳಿ? ಹೊದ್ದು ಮಲಗಿಬಿಡಿ ಬೆಳ್ಳಿ ಮೋಡಗಳ ಕಂಬಳಿ.


**ಸಧ್ಯಕ್ಕೆ ಮನದ ಭಾವನೆಗಳು ಗೋಡೆಯ ಮೇಲಿನ ಚಿತ್ರದಂತೆ ಮನದ ಫ್ರೇಮೊಳಗೆ ಬಂಧಿ.


**ನೀ ಬಂದು ಮನದಲ್ಲಿ ರಂಗೋಲಿಯ ಚುಕ್ಕಿಗಳ ಇಟ್ಟೆ, ಅದಕ್ಕೆ ಬಣ್ಣಗಳ ತುಂಬಿದ್ದು ನನ್ನ ತಪ್ಪೇ ?


**ಗಂಡನ ಭುಜಕ್ಕೊರಗಿ ಧ್ರುವ ನಕ್ಷತ್ರವ ನೋಡುತ್ತಿದ್ದವಳಿಗೆ ನೆನಪಾದವನು, ಹಿಂದೊಮ್ಮೆ ಪ್ರೀತಿಸಿದ್ದ 'ಧ್ರುವ'ನೆಂಬ ಹುಡುಗ.

**ನನ್ನ ಮನದ ನೆರಳು ನಿನ್ನ ನೆನಪು.


**ಮೂಡಣದ ಗಾಳಿಯ ಜೋಗುಳಕೆ ಸೂರ್ಯನಿಗೂ ಎಚ್ಚರವಾಗುವುದು ತಡವಾಗಿಯೇ .!
**ಕಾರಿರುಳ ರಾತ್ರಿಯಲಿ ಬಿದ್ದ ಉಲ್ಕೆಯೊಂದರ ಕಂಡು ಚುಕ್ಕಿಯೊಂದು ನಕ್ಕಿತು.
**ನಿನ್ನ ನಗೆ, ಪ್ರೀತಿ, ಮಾತು, ನೀ ಕೊಟ್ಟ ಕಾಣಿಕೆಗಳು ಯಾವುದು ಬೇಡ ನನಗೆ ನಿನ್ನ ನೆನಪೊಂದರ ಹೊರತು..


**ಕಪಾಟಿನಿಂದ ಇಣುಕುವ ಅಜ್ಜನ ಸ್ವೆಟರ್, ಮಫ್ಲರ್ಗಳು.



**ಮುಂಜಾವಿನಲಿ ಮಂಜಿನ ಮುಸುಕೆಳೆದು ಮಲಗಿಬಿಡುವ ಭೂರಮೆ .


ಹೀಗೆ ಸಾಲುಗಳು ಮ್ಯಾರಥಾನ್ ಓಡುತ್ತಲೇ ಇದ್ದವು ಮನಸಿನಲ್ಲಿ. ಆದರೆ ಹಿಡಿದಿಡುವವರು ಬೇಕಲ್ಲ.! ಮಾಗಿಯ ಚಳಿಯನ್ನು ನಡುಗುತ್ತಲೇ, ಹಬೆಯಾಡುವ ಕಾಫಿಯೊಂದಿಗೆ ಸ್ವಾಗತಿಸಿ. Happy winter :)


































































27 comments:

  1. Hi! really beautiful series.. some are very artistic.. i liked..

    ReplyDelete
  2. Gud work,..grammer mistakes in btw.. english words mean while eg:Fashon designer:-Vastra vinyasagara/garti

    ReplyDelete
  3. ಸೌಮ್ಯ,
    ಫೊಟೊಸ್ ತು೦ಬಾ ಚೆನ್ನಾಗಿವೆ.
    ಮಾಗಿಯ ಸಾಲುಗಳು ಇನ್ನೂ ಸು೦ದರವಾಗಿವೆ.
    ತು೦ಬಾ ಇಷ್ಟವಾಯಿತು.

    ReplyDelete
  4. ಸೌಮ್ಯ, ಫೋಟೋಗಳು ಹಾಗೂ ಸರಳ ಸುಂದರ ಸಾಲುಗಳು ಇಷ್ಟವಾಯ್ತು...

    ReplyDelete
  5. Beautiful Photo Clicks................!!!!!

    ReplyDelete
  6. ತುಂಬಾ ಚನ್ನಾಗಿದೆ... ಹೀಗೆ ಬರೆಯುತ್ತ್ತಾ ಇರಿ...

    ReplyDelete
  7. sundara saalugalu matte chitragaLu...

    thank you..

    ReplyDelete
  8. ಸರಳ ಹಾಗು ಸುಂದರ...

    ReplyDelete
  9. Nature snaps are really good.all d best

    RAGHU-www.ragat-paradise.blogspot.com

    ReplyDelete
  10. ಮಾಗಿಯ ಸಾಲುಗಳು ಅದ್ಭುತ
    ಫೋಟೋಗಳು ಸುಂದರವಾಗಿವೆ

    ReplyDelete
  11. ನಮಸ್ತೆ ಸೌಮ್ಯರಿಗೆ. ನಿಮ್ಮ ಲೇಖನ,ತೆಗೆದ ಚಿತ್ರಗಳು ತುಂಬಾ ಚೆನ್ನಾಗಿದೆ.

    ReplyDelete
  12. thank u satish. yeah some times i do use english words for the efficiency of the line.

    ReplyDelete
  13. ಧನ್ಯವಾದಗಳು ಕವಿತಾ,ಶ್ರೀಧರ್,ಜಿತೇಂದ್ರ ,ಶಿವು ಸರ್,ಅನಂತ್ ,no-one :)

    ReplyDelete
  14. ಪ್ರಗತಿ ಮೇಡಂ,ಸುಮಕ್ಕ,ತೇಜಕ್ಕ,ದಿನಕರ್ ಸರ್ ,ಅಪರಿಚಿತ,Raghu, ಗುರು ಸರ್,ಸೀತಾರಾಮ್ ಸರ್, ಮಹೇಶ್
    ಎಲ್ಲರಿಗೂ ಧನ್ಯವಾದಗಳು :)

    ReplyDelete
  15. ಫೋಟೋಗಳೂ, ಜೊತೆಗೆ ಚಳಿಯನ್ನು ಸ್ವಾಗತಿಸಿದ್ದು ಆಹ್ಲಾದಕರವಾಗಿತ್ತು...:)

    ReplyDelete
  16. ಕವಿ ಮನಗಳ ರೋಮಾಂಚನ ಗೊಳಿಸುತ್ತದೆ ನಿಮ್ಮ ಈ ಸಾಲುಗಳು..

    ReplyDelete
  17. ಫೊಟೊಸ್ ತು೦ಬಾ ಚೆನ್ನಾಗಿವೆ.
    ಮಾಗಿಯ ಸಾಲುಗಳು ಇನ್ನೂ ಸು೦ದರವಾಗಿವೆ.
    ತು೦ಬಾ ಇಷ್ಟವಾಯಿತು.
    ಬಿಸಿ ಕಾಪಿಯನ್ನು ಹೀರುತ್ತಾ ಓದಿದೆ ಬಿಡಿ..

    ReplyDelete
  18. ಚಿತ್ರಗಳು ಸೂಪರ್.... ಮಾಗಿಯ ಚಳಿಯಲ್ಲಿ ಸಾಲುಗಳು ಅದ್ಭುತವಾಗಿ ಮೂಡಿವೆ..ಬಿಸಿ ಕಾಫಿಯ ಕಪ್ ಜೊತೆ ಈ ಸಾಲುಗಳನ್ನು ಬರೆದಿರಾ :-)...?.ಚಳಿಯ ಇನ್ನೊ೦ದು ಮುಖವನ್ನು ತೆರೆದಿಡೋ ಪ್ರಯತ್ನವನ್ನು http://taralegalu.blogspot.com/2010/12/blog-post.html ನಲ್ಲಿ ಮಾಡಿದ್ದೇನೆ. ಸಾದ್ಯವಾದರೆ ಒಮ್ಮೆ ಬೇಟಿ ಕೊಡಿ
    ---ಶ್ರೀ:-)

    ReplyDelete
  19. ಹೀಗೇ ಮಾಗಿಯ ಬಗ್ಗೆ ಗೂಗಲಿಸುತ್ತಾ ನಿಮ್ಮ ಬ್ಲಾಗಿಗೆ ಕಾಲಿಟ್ಟೆ. It is really captivating. ಸೊಗಸಾದ ನುಡಿ-ಚಿತ್ರಗಳು.

    ReplyDelete
  20. geleya nijavagiyu tumba chanagide

    ReplyDelete