Friday, October 1, 2010

ಮಾರಾಟಕ್ಕಿಟ್ಟಿರುವ ಕನಸುಗಳು....







ಕೆಲವು ದಿನಗಳ ಹಿಂದೆ ಸಿರ್ಸಿಗೆ ಹೊರಟಿದ್ದೆ ಒಬ್ಬಳೆ. ಕುಮಟಾ ಸಿರ್ಸಿ ಬಸ್ಸಿನಲ್ಲಿ. ಬೆಳಗಿನ ಸಮಯ, ಬಲಬದಿಯ ಕಿಟಕಿಯಂಚಿನ ಸೀಟು ಕೇಳಬೇಕೇ? ಪಕ್ಕದಲ್ಲಿ ಯಾರೂ ಇರಲಿಲ್ಲ (ಇದ್ದಿದ್ದರೆ ಮಾತಿರುತ್ತಿತ್ತು ). ಒಬ್ಬಂಟಿಯಾದಾಗ ಭಾವನೆಗಳೇ ನನ್ನ ಸಂಗಾತಿಗಳಾಗುವುದು ಮಾಮೂಲು. ನನಗಿಷ್ಟವಾಗುವ ರಸ್ತೆಗಳಲ್ಲಿ ಕುಮಟಾ-ಸಿರ್ಸಿ ರೋಡ್ ಕೂಡ ಒಂದು (ಮಂಗಳೂರು ವಿಶ್ವಮಂಗಳದ ರಸ್ತೆಯೂ ಬಹಳ ಇಷ್ಟವಾಗುತ್ತದೆ). ದ್ವಿಚಕ್ರ ವಾಹನದಲ್ಲಿ ಬಂದರೆ ಘಟ್ಟ ಇಳಿವಾಗಿನ ಮಜವೇ ಬೇರೆ. ರಸ್ತೆಯೊಂದು ಬಿಟ್ಟರೆ ಅಕ್ಕ ಪಕ್ಕವೆಲ್ಲ ಪ್ರಕೃತಿ ನಿರ್ಮಿತವಾದದ್ದು. ಹಸಿರು, ಮುಂಜಾವಿನ ಮಂಜಿನ ಮುಸುಕು, ಅಂಕು ಡೊಂಕಾಗಿ ಸಾಗುವ ರಸ್ತೆ, ಕನಸಂತೆ ಭಾಸವಾಗುವ ಪ್ರಕೃತಿ. ಮನಸೆಂಬ ಮಾಯವಿಗೆ ಇನ್ನೇನು ಬೇಕು ಕನಸು ಕಾಣಲು ? ಇದೇನು ಪ್ರವಾಸ ಕಥನವಂತೂ ಅಲ್ಲ. ನೀವು ತುಂಬಾ ಸಲ ಓಡಾಡಿರಬಹುದು ಈ ರೋಡಿನಲ್ಲಿ. ಪ್ರಕೃತಿಗೆ ನನ್ನ ಮನದ ಭಾವನೆಗಳ ಫ್ರೇಮು ಹಾಕಿದ್ದೇನೆ. ಕಂಡಂಥ ಮಾಮೂಲು ಘಟನೆಗಳಿಗೆ ಭಾವನೆಗಳದ್ದೆ ಕನ್ನಡಿ ಹಿಡಿದಿದ್ದೇನೆ. ಮನದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಕನಸಿನಂತೆ ಬಿಡಿಬಿಡಿಯಾಗಿ ಕಾಣುವ ಸಾಲುಗಳನ್ನು ಓದಿ ನೋಡಿ:




*ಕುಮಟಾದ ಉಪ್ಪಾರ ಕೇರಿಯ ಗಣಪತಿಯ ಮುಂದೆ ಹಾಕಿದ್ದ ಪೆಂಡಾಲು ಬಿಚ್ಚುತ್ತಿದ್ದ ಮುದುಕ, ಪಕ್ಕದಲ್ಲೇ ನಿಂತು ಸಹಾಯವನ್ನೂ ಮಾಡದೆ ಹುಡುಗಿಯರ ನೋಡುತ್ತಾ ಹಲ್ಲು ಕಿಸಿಯುತ್ತಿದ್ದ ಯುವಕ..!


*ವಾಹನಗಳ ಸದ್ದಿಗೆ ಕಿವಿಮುಚ್ಚಿಕೊಂಡು ಪಕ್ಕಾ ಆಳಸಿಯಂತೆ ಬಿದ್ದಿರುವ ರಸ್ತೆಯನು ಗುಡಿಸುತ್ತಿರುವ ಹೆಂಗಸು, ಅದೀಗ ತಾನೆ ಅಂಗಡಿ ತೆರೆದು ಕಡ್ಡಿ ಗೀರುತ್ತಿರುವ ಗೂಡಂಗಡಿಯ ಮಾಲೀಕ.


*ಬೆಳೆದು ದೊಡ್ಡವಳಾಗಿ ಹಸಿರಾಗುವ ಹಂಬಲದಲ್ಲಿದ್ದಂತೆ ತೋರುವ ರಸ್ತೆಯ ಬದಿಯ ಗಿಡದ ಕೆಂಪು ಚಿಗುರು.


*ಬಟಾ ಬಯಲಾಗಿ ಮಲಗಿದ ಕಳೆ ತುಂಬಿಕೊಂಡು ಅಸ್ತವ್ಯಸ್ತವಾಗಿರುವ ಗದ್ದೆ. ಪಕ್ಕದಲ್ಲೇ ಹಾಳು ಸೋರುತ್ತಿರುವ ಮಾಳ ( ಗದ್ದೆ ಕಾಯಲು ಮಾಡಿರುವ ಸಣ್ಣ ಜೋಪಡಿ). ಮನದೊಳಗೆ ಅದೇನೋ ಕಳವಳದ ಭಾವ.


*ಬೃಹತ್ ಮರದ ಅಗಲ ಉದ್ದಗಳನ್ನು ಅಳೆವಂತೆ ಮರವ ಸುತ್ತಿಕೊಂಡಿರುವ ಅದಾವುದೋ ಕಾಡು ಬಳ್ಳಿ. ಹೂ ಬಳ್ಳಿ ನೀನಾಗು ಅರಳಿ ಮರದಲಿ ತೂಗು, ನಾನೇ ಮಾಮರವಾಗಿ ಮೆರೆಯಲೇನು... ಎಂಬ ಭಾವಗೀತೆಯೊಂದರ ಸಾಲನ್ನು ತಂತಾನೇ ಗುನುಗಿಕೊಂಡ ಮನಸು.


*ಪಕ್ಕದ ಬಂದಳಕ (ಪರಾವಲಂಬಿ ಗಿಡ) ಹಿಡಿದು ಬತ್ತುತ್ತಿರುವ ಮರದ್ದೇ ಚಿಂತೆಯಲ್ಲಿರುವಂತೆ ತೋರುವ ಗೆದ್ದಲು ಹಿಡಿದು ಹಾಳಾದ ಮರದ ಬೊಡ್ಡೆ..!


*ಕಾಡು ಹೂವೊಂದರ ಮಕರಂದವ ಹೀರುವ ಗಡಿಬಿದಿಯಲ್ಲಿರುವ ದುಂಬಿ.


*ಗಿಡಗಳ ಎಲೆಯ ಮೇಲಿರುವ ನೀರಹನಿಯಲ್ಲಿ ತನ್ನ ಬಿಂಬ ನೋಡುವ ಹಂಬಲದಲ್ಲಿರುವ ಸೂರ್ಯ ರಶ್ಮಿ.


*ಹುಚ್ಚು ಮಳೆಗೆ ಹುಚ್ಚೆದ್ದು, ಕಡಲ ಸೇರುವ ಧಾವಂತದಲ್ಲಿ ಬೆಳ್ಳಿ ನೆರಿಗೆಯ ಚಿಮ್ಮಿಸುತ್ತಾ ಸಾಗುತ್ತಿರುವ ಝರಿ ..! ರಸ್ತೆಯ ಬದಿಗೆಲ್ಲ ತಾತ್ಕಾಲಿಕ ಜೋಗವನ್ನು ನಿರ್ಮಿಸುವ ಮಳೆರಾಯನ ಲೀಲೆಗೆ ಮೆಚ್ಚಿಕೊಂಡ ಮನಸು.


*ಕಣ್ಮುಚ್ಚಿ ಸುರಿದ ಮಳೆಗೆ ಚಳಿಯೆದ್ದು, ಹಸಿರ ಚಾದರ ಹೊದ್ದು ಮಲಗಿರುವ ಭೂರಮೆ ..!


*ಅದ್ಯಾವುದೋ ಊರಿಗೆ ಹೋಗುವ ಕಾಲು ಹಾದಿಯಲಿ ದನಗಳ ಹಿಂಡಿನ ಹಿಂದೆ ಹೊರಟ ಪೋರನ ಕೈಯಲ್ಲಿ ಒಡತಿ ಕೊಟ್ಟ ಚಕ್ಕುಲಿ..!


*ಅದೆಲ್ಲಿ ಮಳೆಹನಿಸಲಿ ಎಂಬ confusionನಲ್ಲಿ ಇದ್ದಂತೆ ಕಂಡ, ಘಳಿಗೆಗೊಮ್ಮೆ ವೇಷ ಬದಲಿಸುವ ಕಾರ್ಮೋಡದ ತುಂಡು.


*ದಾರಿ ಪಕ್ಕ ನಿಂತು ವಾಹನಗಳ ಗಣತಿ ಮಾಡುವಂತೆ ಕಾಣುವ OFC (Optical Fiber Cable)ಯ ಬೋರ್ಡುಗಳು.


*ದಟ್ಟ ಕಾನನದಲ್ಲಿ ಹರಿವ ಹಳ್ಳವೊಂದರಲ್ಲಿ ಮೀನು ಹಿಡಿಯಲು ದೃಷ್ಟಿ ನೆಟ್ಟಿರುವ ಮಿಂಚುಳ್ಳಿ(Kingfisher), ಹಿಡಿದಿದ್ದು ನೋಡಬೇಕಿತ್ತು ಅಂದುಕೊಂಡ ಮನಸು, ಬಸ್ಸಿನೊಂದಿಗೆ ಮುಂದೆ ಸಾಗಿದ ದೇಹ..!


*ಬಾನಲ್ಲಿ ಬಿಳಿ-ಕರಿ ಮೋಡಗಳ ತಕಧಿಮಿ, ಅದೆಲ್ಲೋ ಕಾಣುವ ನೀಲಾಕಾಶ ಅದಕ್ಕೆ ಯಾವುದಾದರೊಂದು ಆಕಾರದ ಹೋಲಿಕೆ ಕೊಡುವ ಹಂಬಲದಲ್ಲಿದ್ದ ಮನಸು.


*ಚಪ್ಪಲಿರಹಿತ ಪಾದಗಳ ಹೆಜ್ಜೆ ಗುರುತಿಗಾಗಿ ಕಾದು ಕುಳಿತಂತೆ ಕಾಣುವ ಹಸಿಮಣ್ಣು ..!


*ರೋಡಿನಲ್ಲಿಯ ಹೊಂಡಗಳ ಪ್ರಭಾವದಿಂದ 'Tap dance' ಮಾಡುತ್ತಿರುವ ಬಸ್ಸಿನ ಕಿಟಕಿಯ ಗಾಜುಗಳು.!


*20 ರ ಆಸುಪಾಸಿನ ತರುಣಿ ಅವಳ ಬೆನ್ನಿಗೆ ಆರಾಮವಾಗಿ ಮಲಗಿರುವ ಅವಳ ಉದ್ದನೆಯ ಜಡೆಯ ಮೇಲೆ ನನ್ನ ಕಣ್ಣು. ಕುತ್ತಿಗೆಗೆ ಕಚಕುಳಿಯಿಡುತ್ತಿರುವ ನನ್ನ ಜುಟ್ಟಿನ ಮೇಲೆ ಅವಳ ಕಣ್ಣು ..!



*ಅದಾವುದೋ ಅಡ್ರೆಸ್ಸ್ ಹೇಳಲು ತಿಣುಕಾಡುತ್ತಿರುವ ನಿರ್ವಾಹಕ. 'ಗಂಧರ್ವ ಬಾರ್ ' ಎಂದೊಡನೆ ತಿಳಿದುಕೊಂಡ ಪ್ರಯಾಣಿಕ..!


* ತಲೆಯ ಮೇಲಿನ ಖಾಲಿ ಜಾಗವನ್ನು ಮುಚ್ಚಲು. ಮಳೆಗಾಲದಲ್ಲೂ ಡೆನಿಮ್ ಕ್ಯಾಪ್ ಹಾಕಿಕೊಂಡಿದ್ದ ಯುವಕ..!


*ಸರಗೋಲನ್ನು ಅನಾಯಾಸವಾಗಿ ಜಿಗಿದು ತೋಟಕ್ಕೆ ಜಿಗಿದ ದನ. ಎತ್ತು ಇರಬಹುದೆಂದು ಕುತೂಹಲ ತಡೆಯಲಾಗದೆ ತಿರುಗಿ ನೋಡಿದರೆ ಅದು ಆಕಳು..!


*ಹಠ ಮಾಡುತ್ತಾ ಕೆನ್ನೆಯ ಮೇಲೆ ಅಲೆದಾಡುವ ಮುಂಗುರುಳುಗಳು, ಯಾರದೋ ನೆನಪಾಗಿ ನಗುವ ಹುಡುಗಿಯ ಕೆನ್ನೆಯ ಮೇಲೆ ಮೂಡುವ ಗುಳಿ. .!


*ಅಮ್ಮ ಹೆಣೆದುಕೊಟ್ಟ ಎರಡು ಜಡೆಗೆ ಎರಡು ಡೇರೆ ಹೂವು ಮುಡಿದು ಜಂಭದಿಂದ ಹೆಜ್ಜೆ ಹಾಕುತ್ತಿರುವ ಕನ್ನಡ ಶಾಲೆಯ ಹುಡುಗಿ, ನೆನಪಾದ ನನ್ನ ಶಾಲಾ ದಿನಗಳು..!


ಹೀಗೆ ಸಮಯದ ಜೊತೆಗೆ ಓಡುತ್ತಿದ್ದ ಬಸ್ಸಿನಲ್ಲಿ cell phonenalli ನಾನು ಇದೆಲ್ಲ ಬರೆಯುತ್ತಿದ್ದೆ. ಅದೇನು ಅಂದುಕೊಂದರೋ ನೋಡಿದ ಜನರು, ನನಗಾವ ಪರಿವೆಯಿರಲಿಲ್ಲ. ಸುಮ್ಮನೆ ಸುತ್ತಲಿನ ಆಗು ಹೋಗನ್ನು ಕುತೂಹಲದ ಕನ್ನಡಕದೊಳಗೆ ನೋಡುತ್ತಲಿದ್ದರೆ. ಮನಸು ಅದನ್ನು ಶಬ್ದದ ರೂಪದಲ್ಲಿ ಹಿಡಿದಿಡುತ್ತಲಿತ್ತು. ಕೈ ಬರಹಕ್ಕೆ ಇಳಿಸುತ್ತಲಿತ್ತು. ಸಿರ್ಸಿ ಬಸ್ಸ್ಟ್ಯಾಂಡ್ ಬಂದದ್ದೆ ತಿಳಿಯಲಿಲ್ಲ. ನನ್ನಷ್ಟಕ್ಕೆ ನಾನು ನಗುತ್ತಿದ್ದೆ. ನಗುವಿಗೆ ಕಾರಣವೇ ತಿಳಿಯಲಿಲ್ಲ. ಅಥವಾ ಇರಲಿಲ್ಲವೋ ಗೊತ್ತಿಲ್ಲ. .!

53 comments:

  1. ಮುಗ್ದ ಮನಸ್ಸಿಗೇ ಕಂಡದೆಲ್ಲಾ ಕನಸೇ...! ಉತ್ತಮ ಬರಹ continue...

    ReplyDelete
  2. ಸೌಮ್ಯ ಬಹು ರಮಣೀಯವೆನ್ನುವ ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ನಿಮ್ಮ ವರ್ಣನಾ ವೈಖರಿ ಮೆರುಗು ಕೊಟ್ಟಿದೆ...ಚನ್ನಾಗಿದೆ...ನಾನೂ ಓದುತ್ತಿದ್ದಾಗ ಮಂಗಳೂರಿಂದ ಊರಿಗೆ ಬರಲು ೧೮-೨೦ ಘಂಟೆ ತಗಲುತ್ತಿದ್ದರೂ ಮಂಗಳೂರು ಬೆಂಗಳೂರು ರೈಲಲ್ಲಿ ಬರ್ತಿದ್ದೆ ಆ ನಿಸರ್ಗ ವಿಹಂಗಮ ಸವಿಯಲು...

    ReplyDelete
  3. ಧನ್ಯವಾದಗಳು ಸರ್ .... ಪ್ರಕೃತಿಯ ಚೆಲುವಿಗೆ ಸರಿಸಾಟಿ ಯಾವುದೂ ಇಲ್ಲ

    ReplyDelete
  4. ಪ್ರಕೃತಿಯ ಚೆಲುವಿನ ವರ್ಣನೆ - ನಿರೂಪಣಾ ಶೈಲಿ ಚೆ೦ದವಿದೆ.

    ಶುಭಾಶಯಗಳು
    ಅನ೦ತ್

    ReplyDelete
  5. ಸೌಮ್ಯ,
    ನಾನು ತುಂಬಾ ಸಲ ಆ ರಸ್ತೆಯಲ್ಲಿ ಓಡಾಡಿದ್ದೇನೆ.... ನನ್ನ ಅಕ್ಕನ ಮನೆ ಅಲ್ಲೇ ಇರೊದು..... ಬೆಳಿಗ್ಗೆ ಬೆಳಿಗ್ಗೆ ಹೋದರೆ ಅದರ ಮಜಾವೇ ಬೇರೆ.... ಪ್ರಯಾಣದ ಜೊತೆ ಬದಲಾಗುವ ಭಾವನೆಗಳನ್ನು ಚೆನ್ನಾಗಿ ಬರೆದಿದ್ದೀರಿ...ಚೆನ್ನಾಗಿದೆ......

    ReplyDelete
  6. chenaagide soumyaravare... nimma ee prayanadalli nammanu saha(e ratriyalli now 1:15AM :)) prayanikaragi karedoydu.. prakrutiya vichitra, manusyana sachitragalannu chendadinda andavaagi heliddira.. :)

    ReplyDelete
  7. Soumya,

    naanu oorige bandaaga oDaDuva daari idu.. Pratee sala hoguvaaga ondu hosadaada,naviraada anubhava. Ghattada devashthanada hattira nintu Sahyadriya rudra, ramaneeya soundaryavannu saviyuvudu nanna atyanta ishtada kelasagaLalli ondu. Tumbaa chennaagi bannisiddeera..

    Keep writing...

    ReplyDelete
  8. ಸೊಮ್ಯ ರವರೆ .....
    ಮುದ್ದು ಮುಖದ ಚಲುವೆಯ ನೊರೆಂಟು ಕನಸುಗಳುನ್ನು ಆ ದೇವರು ಬೇಗನೆ ನನಸಾಗಲಿ ....
    ಸುಂದರ ನಿರೋಪಣೆ ಚನ್ನಾಗಿದೆ ......

    SATISH N GOWDA
    ನನ್ನ ಸ್ನೇಹಲೋಕ (ORKUT)
    satishgowdagowda@gmail.com
    ನನ್ನವಳ ಪ್ರೇಮಲೋಕ (my blog)
    http://nannavalaloka.blogspot.com

    ReplyDelete
  9. thank u anant sir and Dinakar sir...:)

    ReplyDelete
  10. ಧನ್ಯವಾದಗಳು ತರುಣ್ .. ಸಿರ್ಸಿಗೆ ಬಂದರೆ ನಿಸರ್ಗದ ರಮಣೀಯತೆಯನ್ನು ನೋಡಿ

    ReplyDelete
  11. thanks a lot chetanakka ... :) ನಾನು ನನ್ನ ತಮ್ಮನ ಜೊತೆ ಹೋಗ್ತಾ ಇರ್ತೆ ಬೈಕಿನಲ್ಲಿ

    ReplyDelete
  12. ಚೆನ್ನಾಗಿ ಬರೆದಿದ್ದೀರ ಕಣ್ರೀ ಸೌಮ್ಯ . ಸಾದ್ಯವಾದರೆ ಒಮ್ಮೆ ಶಿರಾಡಿ ಘಾಟಿಯಲ್ಲಿ ವಿಹರಿಸಿ, ಅಲ್ಲಿನ ಪ್ರಕೃತಿಯು ಕೂಡ ಮನಮೋಹಕವಾಗಿದೆ.
    ಶ್ರೀ... :-)

    ReplyDelete
  13. "ಚಪ್ಪಲಿರಹಿತ ಪಾದಗಳ ಹೆಜ್ಜೆ ಗುರುತಿಗಾಗಿ ಕಾದು ಕುಳಿತಂತೆ ಕಾಣುವ ಹಸಿಮಣ್ಣು ..!"
    ..ಹಾಗೂ ಇನ್ನಷ್ಟು ಸೂಪರ್ರ್..

    ReplyDelete
  14. ಸೌಮ್ಯಾ...

    ಎಲ್ಲರೂ ಕಾಣುವ ದೃಶ್ಯವನ್ನು ಎಷ್ಟು ಚಂದವಾಗಿ ನೋಡಿ..
    ಅಂದದ ಕನಸುಗಳನ್ನು ಬಿಡಿಸಿಟ್ಟಿದ್ದೀರಾ!!
    ಇದಕ್ಕೇ ಹೇಳುವದು... ಬರೆಯುವದನ್ನು ಅನುಭವಿಸಿ ಬರೆಯ ಬೇಕೆಂದು...!!

    ಮತ್ತೆ ಮತ್ತೆ ಓದಿದೆ.. !

    ನಾನೇ.. ಹೋಗಿ ನೋಡಿ ಅನುಭವಿಸಿದಂತಾಯಿತು...

    ಸುಂದರ ಕನಸುಗಳಿಗೆ ನನ್ನದೊಂದು ಸಲಾಮ್.. !!

    ReplyDelete
  15. ಖಂಡಿತ ಶ್ರೀ ಅವರೇ ..... ಘಟ್ಟಪ್ರದೇಶದ ಆ ನಿಸರ್ಗದಲ್ಲಿ ರುದ್ರತೆಯಿರುತ್ತದೆ, ರಮನೀಯತೆಯೂ ಇರುತ್ತದೆ. ಶಾಂತಿಯೂ ಇರುತ್ತದೆ, ಭೀಕರತೆಯೂ ಇರುತ್ತದೆ..:)
    ಧನ್ಯವಾದಗಳು ...

    ReplyDelete
  16. ಧನ್ಯವಾದಗಳು ಪ್ರಕಾಶಣ್ಣ ನಿಮ್ಮ ಆತ್ಮೀಯ ನುಡಿಗೆ..... ನಡೆಗೆ ಎಲ್ಲದಕ್ಕೂ .....:)

    ReplyDelete
  17. ಸೌಮ್ಯರವರೆ,

    ನಿಮ್ಮ ಪ್ರಯಾಣದಲ್ಲಿ ಕಂಡ ದೃಶ್ಯಗಳಿಗೆ ಸಾಲುಗಳ ವಿವರಣೆ ಚೆನ್ನಾಗಿದೆ. ಇತ್ತ ಗದ್ಯವೂ ಅಲ್ಲದ[ಗದ್ಯವೇ ಸರಿ]ಪದ್ಯವೂ ಅಲ್ಲದ ಹೊಸ ಪ್ರಯೋಗ ಇಷ್ಟವಾಯ್ತು..

    ReplyDelete
  18. thank u shivu sir...... i think u are visiting my blog for the first time..... :) ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಮುಂದುವರೆಯಲಿ ...

    ReplyDelete
  19. ರವಿ ಕಾಣದ್ದನ್ನ ಕವಿ ಕಂಡ ಅನ್ನೋ ಹಾಗೆ.. ಸಾಮಾನ್ಯತೆಯಲ್ಲಿ ವಿವಿಧತೆ ತಂದಿದೆ ನಿನ್ನ ಬರಹ...
    ನನ್ಗೊನ್ದು ಸಂದೇಹಅಂದ್ರೆ..ಕನಸುಗಳು ಮಾರಾಟಕ್ಕೆ ಯಾಕಿವೆ ಅಂತ!!!

    *ಗಿಡಗಳ ಎಲೆಯ ಮೇಲಿರುವ ನೀರಹನಿಯಲ್ಲಿ ತನ್ನ ಬಿಂಬ ನೋಡುವ ಹಂಬಲದಲ್ಲಿರುವ ಸೂರ್ಯ ರಶ್ಮಿ.
    *20 ರ ಆಸುಪಾಸಿನ ತರುಣಿ ಅವಳ ಬೆನ್ನಿಗೆ ಆರಾಮವಾಗಿ ಮಲಗಿರುವ ಅವಳ ಉದ್ದನೆಯ ಜಡೆಯ ಮೇಲೆ ನನ್ನ ಕಣ್ಣು. ಕುತ್ತಿಗೆಗೆ ಕಚಕುಳಿಯಿಡುತ್ತಿರುವ ನನ್ನ ಜುಟ್ಟಿನ ಮೇಲೆ ಅವಳ ಕಣ್ಣು
    *ಬೆಳೆದು ದೊಡ್ಡವಳಾಗಿ ಹಸಿರಾಗುವ ಹಂಬಲದಲ್ಲಿದ್ದಂತೆ ತೋರುವ ರಸ್ತೆಯ ಬದಿಯ ಗಿಡದ ಕೆಂಪು ಚಿಗುರು.
    ...liked these lines a lot!!!

    ReplyDelete
  20. good question ಸುಮನಕ್ಕ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಂಥ ದೃಶ್ಯ ವೈಭವ ಒಂದು ಕನಸೇ ಸರಿ..ಕಿರಾಣಿ ಅಂಗಡಿಯಲ್ಲಿ ಮಾರಾಟಕಿಟ್ಟಿರುವ ಪೆಪ್ಪರಮೆಂಟಿನ ತರಹ ಬಿಡಿ ಬಿಡಿಯಾಗಿರುವ ಸಾಲುಗಳು.ಅದ್ಕೆ ಈ ಟೈಟಲ್ಲು.thanks a lot........ :)

    ReplyDelete
  21. ನಮಸ್ತೆ ಸೌಮ್ಯ..
    ಪ್ರಕೃತಿ ಮಾತೆಯನ್ನು ನಿಮ್ಮ ಸುಂದರ ಕನಸೆಂಬ ಫ್ರೇಮ್ ನಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಿರಿ...
    ನನ್ನದೊಂದು ಸಲಾಂ........

    ReplyDelete
  22. thanks a lot naveen ...... kanasalla idu... bhavanegala framu...........:)

    ReplyDelete
  23. very nice soumya... heege barita iri

    ReplyDelete
  24. ಪ್ರಕೃತಿಯ ವರ್ಣನೆ ಚೆನ್ನಾಗಿದೆ....
    ಬರೆಯುತ್ತಾ ಇರಿ...

    ReplyDelete
  25. Tumba chennagide soumya

    khushiyaytu nimma alakarika padagala jodanege

    ReplyDelete
  26. ಧನ್ಯವಾದಗಳು ಮನಸು ....:)
    ಧನ್ಯವಾದಗಳು ಸವಿಗನಸು ..:)

    ReplyDelete
  27. ಸೌಮ್ಯ ಅವರೇ ನಾನು ಕೂಡ ಆಗಾಗ ಬರೆಯೋ ಪ್ರಯತ್ನ ಮಾಡ್ತಾ ಇದ್ದೀನಿ. ನಿಮಗೆ ಬಿಡುವಾದಾಗ ನನ್ನ ಬರಹಗಳನ್ನು ಓದಿ ತಮ್ಮ ಸಲಹೆಸೂಚನೆಗಳನ್ನು ನೀಡಬೇಕಾಗಿ ವಿನ೦ತಿ
    http://taralegalu.blogspot.com/2010/02/blog-post.html
    ದನ್ಯವಾದಗಳು...
    ಶ್ರೀ...:-)

    ReplyDelete
  28. "ಸುಮ್ಮನೆ ಸುತ್ತಲಿನ ಆಗು ಹೋಗನ್ನು ಕುತೂಹಲದ ಕನ್ನಡಕದೊಳಗೆ ನೋಡುತ್ತಲಿದ್ದರೆ. ಮನಸು ಅದನ್ನು ಶಬ್ದದ ರೂಪದಲ್ಲಿ ಹಿಡಿದಿಡುತ್ತಲಿತ್ತು".... Good Sowmya... :-)Nice observation..:)

    ReplyDelete
  29. ಸುಂದರ ಸಾಲುಗಳು, ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ..

    ReplyDelete
  30. ಪ್ರಕೃತಿಯ ಸೊಬಗನ್ನು ಎಲ್ಲ ಮನಗಳು ಸವಿಯುವವು. ಆ ಸವಿಯನ್ನು ರಸವತ್ತಾಗಿ ಕವಿಗಣ್ಣಳಿ ಹೆಣೆದು ಓದುಗರನ್ನು ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುವ ತಮ್ಮ ಚತುರ ಬರವಣಿಗೆಗೆ ನನ್ನ ನಮಸ್ಕಾರ.

    ReplyDelete
  31. namaskara seetaram sir..... thanks a lot...... :)

    ReplyDelete
  32. ಸೂಪರ್ ಸೂಪರ್ ಸೂಪರ್,,,, ಕನಸುಗಳ ಭಾವನೆಗಳ ಸಾಲುಗಳು.... ಏನು ಹೇಳೋಕ್ಕೆ ಆಗ್ತಾ ಇಲ್ಲ.... ಓದುತ್ತ ಓದುತ್ತ. ನಾನು ಕನಸಿನ ಲೋಕದೊಳಗೆ ಕಳೆದು ಹೋಗಿದ್ದೆ...
    ವೆರಿ ನೈಸ್,,, ಮುಂದುವರಿಸಿ ಸೌಮ್ಯ .... ಇಂತಹ ಕನಸುಗಳನ್ನು ಮಾರಾಟಕ್ಕೆ ಇಡಲು ಮಸಸ್ಸು ಅದರೂ ಹೇಗೆ ಬರುತ್ತೆ ಸೌಮ್ಯ :-)

    ReplyDelete
  33. thanks a lot guru...... :) ಇಂಥ ಕನಸುಗಳನ್ನು ಬಚ್ಚಿಟ್ಟುಕೊಂಡಾದರೂ ಮಾಡುವುದೇನಿದೆ ಹೇಳಿ ??...:)

    ReplyDelete
  34. Soumya,

    Sogasaada baraha, sundara neerupane, Dhanyavadagalu...

    ReplyDelete
  35. ಕೆಲವೊಂದು ಡೆಫಿನೇಶನ್, ಸಾಲುಗಳು, ಶಬ್ಧಗಳು, ಮಸ್ತ್ ಇದ್ದು..:)

    ReplyDelete
  36. devimane ghatta, arebail ghattada daari nanage tumba istavadaddu. nimma lekhana oduttiruvaaga naanu alle hodante bhasavaaguttittu. adbhuthavaada lekhana!!!!!!!!!!!!!!!!!!!

    ReplyDelete
  37. Bahala sundaravada salugalu.@Soumya ravare........... Sadyavadare tavu Nonda Manasugaligagi kelavu kavana galannu bareyiri.

    ReplyDelete
  38. ರೋಡಲ್ ಹೋಗೋವಾಗ ಅಕ್ಕ ಪಕ್ಕ ನೋಡ್ಕೊಂಡ್ ಹೋಗು ಅಂತ ಮನೇಲ್ ಹೇಳ್ದಗೆಲ್ಲ ನನ್ seriousಅಗ ತೊಗೋಳ್ಲಿಲ. ತೊಗೊಂಡಿದ್ದಿರೆ ಆ ರವಿ ಕಾಣದ್ದು ಈ ಕವಿ ಹೆಂಗ್ ಕಂಡನೋ ಹಗೆ ಈ ಕವಿ ಕಾಣದ್ದು ಈ ಕಪಿ ಕಣ್ತಿತೋ ಏನೋ..

    ReplyDelete
  39. ಸೌಮ್ಯಾ,
    ಮೌನವಾಗಿ ಮನದೊಂದಿಗಿರಲು ಅವಕಾಶ ಸಿಕ್ಕಾಗ ಮನದಲ್ಲಿ ಮೂಡುವ ಮಿಂಚಿನ ಬಳ್ಳಿಗಳನ್ನೆಲ್ಲ ಸೇರಿಸಿ,
    ಸುಂದರ ಪದಗಳನ್ನು ಪೋಣಿಸಿ ಮಾಲೆ ಮಾಡಿಕೊಟ್ಟ ರೀತಿ ತುಂಬಾ ಇಷ್ಟ ಆಯ್ತು ಕಣಮ್ಮಾ ತಂಗಿ.
    ....Keep it.
    -Nagendra Muthmurdu

    ReplyDelete
  40. I have been dreaming of going thru Ghat sections. It has not been possible because of schedules. Devimane ghattad bagge tumba keliddene, innu hogi nodle beku. Thanks to the inner eye in you.

    ReplyDelete
  41. ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು. ಎಲ್ಲರಿಗೂ ಆರೋಗ್ಯ, ನೆಮ್ಮದಿ ಮತ್ತು ಸುಖ ಆ ಕರುಣಾಮಯಿಯಾದ ಶಿವನು ಕೊಡಲೆಂದು ಪ್ರಾರ್ಥಿಸೋಣ. ಹಾಂ ಅಂದ ಹಾಗೆ ನೀವು ಶಿವರಾತ್ರಿ ಹೇಗೆ ಆಚರಿಸ್ತೀರಾ? ಜಾಗರಣೆ ಏನಾದ್ರು ಮಾಡ್ತೀರಾ? ವಿಶೇಷ ಆಚರಣೆ ಏನಾದ್ರು ಇದ್ರೆ ಬರೆದು ತಿಳಿಸಿ.
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ

    ReplyDelete