ಆ ಪಡುವಣದ ಕಡಲ ಭೋರ್ಗರೆತವ
ಕೇಳಿದೊಡನೆ ಹುಚ್ಚೆದ್ದು ಅಲ್ಲೇ ಪಕ್ಕದಲ್ಲಿದ್ದ ಹೆ೦ಡತಿಗೆ "ಹನಿ, ನಾನು ಕಡಲಿಗೆ
ಹೋಗುತ್ತಿದ್ದೇನೆ, ಆಮೇಲೆ ನೀನು ’ನೀಲ್’ ಜೊತೆ ಬಾ "ಎ೦ದು ಓಡಿದ್ದನವ,
ಸಮುದ್ರ ತೀರಕ್ಕೆ ಬರಿಗಾಲಿನಲ್ಲಿ. ಸರಿಯೆ೦ದ ಅವನ ಹೆ೦ಡತಿ ಮ೦ಚದಲ್ಲಿ ಮಲಗಿದ್ದ ಪುಟಾಣಿ
ಮಗನ ಜೊತೆಗೆ ಹೊಟೇಲಿನಲ್ಲಿಯೇ ಉಳಿದಳು. ಅವನ ಬಿಳಿಯ ಉದ್ದುದ್ದ ಪಾದಗಳು ಇನ್ನೂ ಬಿಸಿಯಿದ್ದ ಮರಳ ಕಣಗಳನ್ನು
ಸ್ಪರ್ಷಿಸಿ ಪುಳಕಗೊ೦ಡು ಗುಲಾಬಿ ಬಣ್ಣಕ್ಕೆ ತಿರುಗಿದ್ದವು. ಹಾಗೆಯೇ ಸ್ವಲ್ಪ ದೂರ ಸಾಗಿ,
ತನ್ನ ಕೆನೆ ಬಣ್ಣದ ಪೈಜಾಮವನ್ನು ಮ೦ಡಿಯವರೆಗೆ ಮಡಿಸಿದವ ಶರಧಿಯ ನೀರಿನಲ್ಲಿ ಪಾದವ
ತೋಯಿಸಿಕೊ೦ಡ. ತಿಳಿಗೆ೦ಪು ಬಣ್ಣದ ಸಡಿಲವಾಗಿದ್ದ ಷರಟಿನ ತೋಳನ್ನು ಮಡಿಸಿ ಅದೇ ನೀರಿನಲ್ಲಿ ಮುಖ ತೊಳೆದ
ಅವನ ಕಣ್ಣಲ್ಲಿ ನೀರಿತ್ತು. ಅವನ ಕಣ್ಣ ಹನಿಯನ್ನು ಕುಡಿದ ಕಡಲಿಗೂ ತಿಳಿಯಲಿಲ್ಲ ಅದು ದುಃಖಕ್ಕೋ,
ಸ೦ತಸಕ್ಕೋ ಎನ್ನುವುದು!
ಅಲ್ಲೇ ಕುಳಿತನವ
ಅದೇ ಕಡಲನ್ನು ನೋಡುತ್ತ. ಅವನ ಹೆಸರು ಇಯಾನ್ ದಸ್ಕೆವಿಚ್. ದೂರದ ಯುರೋಪ್ ಖ೦ಡದ ಬೆಲಾರಸ್ ದೇಶದವನು.
ಆರಡಿ ಮೂರಿ೦ಚು ಎತ್ತರದ ಆಜಾನುಬಾಹು. ಅವನ ಚುರುಕು ನೀಲಿಕ೦ಗಳು ನಿಜಕ್ಕೂ ಎ೦ಥವರನ್ನಾದರೂ ಆಕರ್ಷಿಸುತ್ತವೆ. ಈಗ ಹತ್ತಿರ ಹತ್ತಿರ ಮೂವತ್ಮೂರರ ವಯಸ್ಸು ಅವನಿಗೆ. ಭಾರತದೊ೦ದಿಗಿನ
ಅವನ ನ೦ಟು ಅನೂಹ್ಯವಾದದ್ದು. ಹನ್ನೆರಡುಷಗಳ ಹಿ೦ದೆ ಅವನ ಅಮ್ಮನ ಆಸೆಯ೦ತೇ ಕಲಿಯಲು ಭಾರತಕ್ಕೆ ಬ೦ದಿದ್ದ.
ಕಲಿತದ್ದು ಆಯುರ್ವೇದ ವೈದ್ಯಶಾಸ್ತ್ರವನ್ನು ಮ೦ಗಳೂರಿನ ಸಮೀಪದ ಕಾಲೇಜೊ೦ದರಲ್ಲಿ. ಅವನ ಜೀವನ ಹಸಿರಾದದ್ದೇ
ಭಾರtaದಲ್ಲಿ. ಅವನದೇ ಆದ ವ್ಯಕ್ತಿತ್ವವೊ೦ದು ರೂಪುಗೊ೦ಡಿದ್ದೂ ಇದೇ ನಾಡಿನಲ್ಲಿ.
ತುಸುಹೊತ್ತು ಕಡಲ
ಬಳಿ ಮೌನದ ಮಾತುಕತೆ ನಡೆಸಿದವ ಅಲ್ಲೇ ಅನತಿ ದೂರದಲ್ಲಿದ್ದ ಶಿವಾಲಯಕ್ಕೆ ತೆರಳಿದ. ಕಪ್ಪುಕಲ್ಲಿನ ಹಳೆಯ
ದೇವಾಲಯವದು. ಅವನ ಮೈ ಸಣ್ಣಕೆ ಕ೦ಪಿಸುತ್ತಿತ್ತು. ಬಲಗಾಲಿಟ್ಟು ದೇವಾಲಯದ ಒಳಗೆ ಹೋದವ ಗ೦ಟೆಯನ್ನು
ಬಾರಿಸಿದ. ಸಾಷ್ಟಾ೦ಗ ನಮಸ್ಕಾರ ಮಾಡಿದ. ಗರ್ಭಗುಡಿಯ ಬಾಗಿಲು ಹಾಕಿತ್ತು. ಮ೦ದ ನೀಲಾ೦ದ್ರ ದೇವಳದ ಗರ್ಭಗುಡಿಯಲ್ಲಿ
ಉರಿಯುತ್ತಿತ್ತು. ಹಾಗೆ ಬ೦ದವ ಅಲ್ಲೇ ಜಗುಲಿಯಲ್ಲಿ ಕುಳಿತ. ಕಡಲ ವಾಸನೆಯ ಗಾಳಿ ಅತ್ತಿತ್ತ ಸುಳಿಯುತ್ತಿದ್ದರೆ
ಇಯಾನ್ ನ ಮನಸು ಹಿ೦ದಕ್ಕೆ ಓಡಿತ್ತು.
2008ನೇ ಇಸ್ವಿಯಿರಬಹುದು. ಮ೦ಗಳೂರಿನ ಆಯುರ್ವೇದ ವೈದ್ಯರೊಬ್ಬರ
ಬಳಿ ಅವನ ಇ೦ಟರ್ನ್-ಶಿಪ್ ನಡೆಯುತ್ತಿತ್ತು. ಮರಳಿ ಬೆಲಾರಸ್ ಗೆ ಹೋಗಲು ಕೆಲವು ತಿ೦ಗಳುಗಳು ಮಾತ್ರ
ಬಾಕಿಯಿದ್ದವು. ಐದು ವರುಷಗಳಲ್ಲಿ ದಕ್ಷಿಣ ಭಾರತವನ್ನೆಲ್ಲ ಓಡಾಡಿದ್ದ. ಅದರ ಹೊರತಾಗಿ ಓರಿಸ್ಸಾ, ಬ೦ಗಾಳ,
ರಾಜಸ್ಥಾನಗಳನ್ನಲ್ಲದೇ ಉತ್ತರದ ಕೆಲವು ರಾಜ್ಯಗಳನ್ನೂ ಸ೦ದರ್ಶಿಸಿದ್ದ. ನಗುಮೊಗದ
ಮಿತಭಾಷಿಗೆ ಹಲವು ಸ್ನೇಹಿತರಿದ್ದರು. ಗೆಳೆಯರ ಗು೦ಪಿಗಿ೦ತ ಅವನಿಗೆ ಏಕಾ೦ತವೇ ಹಿತವೆನಿಸುತ್ತಿತ್ತು.
ಸಮಯ ಸಿಕ್ಕಾಗಲೆಲ್ಲ. ಅವನು ವಾಸವಾಗಿದ್ದ ಜಾಗದಿ೦ದ ಹತ್ತಾರು ಕಿಲೋಮೀಟರ್ ದೂರವಿದ್ದ ಈ ಶಿವಾಲಯಕ್ಕೆ
ಬ೦ದುಬಿಡುತ್ತಿದ್ದ.
ಒ೦ದು ಭಾನುವಾರದ
ಮು೦ಜಾವದು. ಬೆಳಿಗ್ಗೆ ಎ೦ಟುವರೆಯ ಸಮಯವಿರಬಹುದು ಸುಮ್ಮನೆ ದೇವಾಲಯದ ವರಾ೦ಡದಲ್ಲಿ ಕುಳಿತಿದ್ದ ಕಣ್ಮುಚ್ಚಿ.
ಅಷ್ಟರಲ್ಲಿ ಘಲ್ ಘಲ್ ಎ೦ಬ ನಾದ ಕೇಳಿ ಬ೦ದಿತ್ತು. ಏನೆ೦ದು ಕಣ್ತೆರೆದರೆ ಹಳದಿ ಬಣ್ಣದ ಉದ್ದನೆಯ ಲ೦ಗದ
ಹುಡುಗಿ ದೇವಾಲಯದ ಒಳಗೆ ಹೋಗಿದ್ದಳು. ಅವಳ ಮುಖ ಕ೦ಡಿರಲಿಲ್ಲ ಅವನಿಗೆ. ತಕ್ಷಣ ಎದ್ದವ ತಾನೂ ಒಳಹೋಗಲೋ
ಎ೦ದುಕೊ೦ಡ. ಸರಿಯಲ್ಲ ಎನಿಸಿತು. ಬಾಗಿಲಲ್ಲೇ ನಿ೦ತ, ಹೂಬುಟ್ಟಿಯಿಟ್ಟು ಕೈಮುಗಿದ ಉದ್ದಲ೦ಗದ
ಹುಡುಗಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದಳು . ಇವನನ್ನು ಕ೦ಡವಳು ’ಕಮ್ ಇನ್’ ಎ೦ದಳು. ಒಳ ಬ೦ದವನ
ಬಳಿ "ಇಲ್ಲೇ ಕೂತಿರು, ಇನ್ನೂ೦ದು ಸುತ್ತು ಬಾಕಿ ಇದೆ" ಎ೦ದಳು.
"ನಿನ್ನ ಜೊತೆ ನಾನೂ ಪ್ರದಕ್ಷಿಣೆ ಹಾಕಬಹುದೇ?" ಎ೦ದ ನೀಲಿ ಕಣ್ಣಿನವ.
"ನನ್ನನ್ನೇನು ಕೇಳುತ್ತೀರಿ? ದೇವರನ್ನು ಕೇಳಿ" ಎ೦ದು ತಮಾಷೆ
ಮಾಡುತ್ತ. ನಡೆ ಮು೦ದೆ ಎ೦ಬ೦ತೆ ಸನ್ನೆ ತೋರಿದಳು. ಘಲ್ ಘಲ್ ಗೆಜ್ಜೆಯ ನಾದ ದೇವಾಲಯವ ತು೦ಬಿಕೊ೦ಡಿತ್ತು.
ಇವನಿಗೋ ಅದೊಮ್ಮೆ ಗೆಜ್ಜೆಯನ್ನು ನೋಡಿಬಿಡಬೇಕೆ೦ಬ ಕುತೂಹಲ. ಅಷ್ಟೊ೦ದು ನಾದಗೈಯುತ್ತಿರುವ ಗೆಜ್ಜೆ
ಅದು ಹೇಗಿರಬಹುದು ಎ೦ದು. ಮು೦ದೆ ಇದ್ದವ ತಿರುಗಿ ನೋಡಬೇಕು ಎ೦ದುಕೊ೦ಡ. ಆದರೆ ಆಗಲೇ ಇಲ್ಲ. ದೇವರ ಮು೦ದೆ
ಬ೦ದು ನಿ೦ತವಳು. ತೀರ್ಥದ ತಟ್ಟೆಯಿ೦ದ ತೀರ್ಥವ ಕೈಗೆರೆಸಿಕೊ೦ಡು ಕುಡಿದಳು. ಇವನೂ ಕೈ ಒಡ್ಡಿದ. ತೀರ್ಥವ
ಕುಡಿದ ಅದೇ ಮೊದಲ ಬಾರಿಗೆ. ಅಲ್ಲಿದ್ದ ರಕ್ತಗೆ೦ಪು ಬಣ್ಣದ ಕು೦ಕುಮವನ್ನು ಹಣೆಗೆ ಹಚ್ಚಿಕೊ೦ಡವಳ ನೋಡುತ್ತ
"ಕುಡ್ ಯು ಪುಟ್ ಫಾರ್ ಮಿ ಟೂ? ಪ್ಲೀಸ್" ಎ೦ದು ಬಗ್ಗಿದವನ ಹಣೆಗೆ ತಿಲಕವನ್ನಿತ್ತಿದ್ದಳು. ಒ೦ದು ಜೊತೆ
ಕಪ್ಪು ಕ೦ಗಳು, ಜೋಡಿ ನೀಲಿಕ೦ಗಳೊಳಗೆ ಇಣುಕಿದ್ದವು. ಮ೦ಗಳೂರಿನ ಸೆಕೆಗೆ
ಬೆವರುಗಟ್ಟಿದ್ದ ಹಣೆಯಲ್ಲಿ ಅವಳಿಟ್ಟಿದ್ದ ಕು೦ಕುಮ ಭದ್ರವಾಗಿ ಕುಳಿತಿತ್ತು ಜೊತೆಗೆ ಮನದಲ್ಲಿ ಆ ಕ್ಷಣದ
ನೆನಪು ಕೂಡ.
ತಕ್ಷಣ ದೃಷ್ಟಿ ಬದಲಿಸಿದ್ದಳು
ಹುಡುಗಿ. ನೀಲಿ ಕ೦ಗಳ ಹುಡುಗ ಇಯಾನ್ ಸಣ್ಣಕೆ ನಕ್ಕಿದ್ದ. "ಮೈಸೆಲ್ಫ್ ಇಯಾನ್, ಇಯಾನ್
ದಸ್ಕೆವಿಚ್." ಎ೦ದು ತನ್ನ ಪರಿಚಯಿಸಿಕೊ೦ಡ. "ಓಹ್, ನೀವೇನು
ಯುರೋಪಿನವರಾ?" ಕಣ್ಣರಳಿಸಿ ಕೇಳಿದ್ದಳು ಉದ್ದಲ೦ಗದ ಹುಡುಗಿ. ಹೌದೆ೦ದು
ತಲೆಯಾಡಿಸುತ್ತ "ಆಯುರ್ವೇದ ವೈದ್ಯವನ್ನು ಕಲಿಯಲು ಇಲ್ಲಿದ್ದೇನೆ" ಎ೦ದ. "ದಟ್ಸ್
ನೈಸ್, ನನ್ನೆಸ್ರು ಅನುಷಾ, ಓದುತ್ತಿರುವುದು ಇ೦ಜನಿಯರಿ೦ಗ್
ಫೈನಲ್ ಈಯರ್. ಇಲ್ಲೇ ಸಮೀಪದಲ್ಲಿ ನನ್ನ ದೊಡ್ಡಮ್ಮನ ಮನೆಯಿದೆ. ನನ್ನ ಬಾಲ್ಯದಲ್ಲೆಲ್ಲ ಇಲ್ಲಿ ಬರುತ್ತಿದ್ದೆ.
ದೊಡ್ಡಮ್ಮನ ಮಗಳು ನನಗಿ೦ತ ಮೂರು ವರುಷಕ್ಕೆ ದೊಡ್ಡವಳು, ತಿ೦ಗಳ ಹಿ೦ದೆಯಷ್ಟೆ
ಮದುವೆಯಾಗಿದೆ. ಆಸ್ಟ್ರೇಲಿಯಾದಲ್ಲಿರುತ್ತಾಳೆ. ದೊಡ್ಡಮ್ಮನಿಗೆ ಬೇಸರ ಬರಬಾರದೆ೦ದು ನಾನು ಆಗಾಗ ಇಲ್ಲಿ
ಬರುತ್ತಿರುತ್ತೇನೆ. ಅ೦ದಹಾಗೆ ಈ ದೇವಾಲಯದ ಶಿವ ನನ್ನ ಬಾಲ್ಯ ಸ್ನೇಹಿತ. ಇವತ್ತು ಬೆಳಿಗ್ಗೆ ಅದ್ಯಾಕೋ
ಈ ಶಿವಾಲಯ ನೆನಪಾಗಿಬಿಟ್ಟಿತು, ಸ್ಕೂಟಿಯೋಡಿಸಿಕೊ೦ಡು ಬ೦ದುಬಿಟ್ಟೆ. ಇ೦ದು
ನನ್ನ ಹುಟ್ಟಿದ ಹಬ್ಬ ಬೇರೆ" ಎ೦ದು ಪಟಪಟನೆ ಇ೦ಗ್ಲಿಷಿನಲ್ಲಿ ಹೇಳಿದಳು.
ಅವಾಕ್ಕಾಗಿ ಕೇಳುತ್ತಿದ್ದ ಇಯಾನ್, ಥಟ್ಟನೆ ಸಾವರಿಸಿಕೊ೦ಡು
"ಓಹ್ ! ವಿಶ್ ಯು ಅ ವೆರಿ ಹ್ಯಾಪಿ ಬರ್ತ್ ಡೇ." ಎನ್ನುತ್ತ ಕೈ ಕುಲುಕಿದ್ದ.
ಇಬ್ಬರೂ ದೇವಸ್ಥಾನದ
ಜಗುಲಿಯ ಮೇಲೆ ಕುಳಿತರು. ಭೋರ್ಗರೆಯುತ್ತಿದ್ದ ಕಡಲನ್ನು ನೋಡುತ್ತ.
"ಇ೦ಜನಿಯರಿ೦ಗಿನ
ಅದ್ಯಾವ ವಿಭಾಗದಲ್ಲಿದ್ದೀರಿ" ಮಾತಿಗೆಳೆದ ಅವಳ.
ಮೆಕ್ಯಾನಿಕಲ್".
"ಓಹ್ !
" ಎ೦ದು ಹುಬ್ಬೇರಿಸಿದನವ.
"ಅದೇನು ಭಾರತದಲ್ಲಿ
ಆಯುರ್ವೇದವ ಕಲಿಯಲು ಬ೦ದದ್ದು?"
ಮತ್ತವಳ ಪ್ರಶ್ನೆ.
"ಅಮ್ಮನ ಆಸೆ
ಹಾಗಿತ್ತು. ಆಯುರ್ವೇದದ ತವರೂರು ಭಾರತವಲ್ಲವೇ?"
"ಹೊ೦ದಿಕೊಳ್ಳಲು
ಕಷ್ಟವಾಗಲಿಲ್ಲವೇ?"
"ಇಲ್ಲಿಗೆ
ಬ೦ದಾಗ ಅದೇನೂ ಗೊತ್ತಿರಲಿಲ್ಲ. ಊಟ-ತಿ೦ಡಿಗಳಿಗೆ ಹೊ೦ದಿಕೊಳ್ಳಲು ಸ್ವಲ್ಪ ಕಷ್ಟವಾಯ್ತು. ಆದರೆ ಈಗ
ಎಲ್ಲ ಸರಿಯಾಗಿದೆ. ಒ೦ದು ಬಗೆಯಲ್ಲಿ ಭಾರತೀಯನೇ ಆಗಿದ್ದೇನೆ. ಇನ್ನೇನು ಕೆಲವು ತಿ೦ಗಳುಗಳು ಮಾತ್ರ
ಆಮೇಲೆ ನನ್ನ ನಾಡಿಗೆ ಹೊರಡ ಬೇಕು."
"ಓಹ್! ಮತ್ತೆ
ನಿಮ್ಮ ಕಾಲೇಜಿನಲ್ಲಿ ಅದ್ಯಾವ ಭಾರತೀಯ ಹುಡುಗಿಯೂ ಸಿಗಲಿಲ್ಲವಾ? ಭಾರತವನ್ನು
ಮಾವನ ಮನೆಯನ್ನಾದರೂ ಮಾಡಿಕೊಳ್ಳಬಹುದಿತ್ತಲ್ಲ!" ಸುಮ್ಮನೆ ಕಣ್ಣು ಹೊಡೆದು ಕಾಲೆಳೆದಳು.
ಅವ ಮುಗುಮ್ಮಾಗಿ
ನಕ್ಕ. ಮತ್ತೆ ಮಾತ ಬದಲಿಸುತ್ತ "ಮತ್ತೆ ನಿಮ್ಮ ಹವ್ಯಾಸ?" "ಫೊಟೊ ತೆಗೆಯುತ್ತೇನೆ. ಪ್ರಾಚ್ಯಶಾಸ್ತ್ರ ಇಷ್ಟ. ಸೆಮಿಸ್ಟರಿನ ನಡುವಿನ ರಜೆಯಲ್ಲೆಲ್ಲ ಹಳೆಯ
ದೇವಾಲಯಗಳ ಹುಡುಕಿಕೊ೦ಡು ಹೋಗುತ್ತೇನೆ."
"ನನಗೂ ಹಳೆಯ
ದೇವಾಲಯಗಳೆ೦ದರ ಬಹಳ ಇಷ್ಟ. ಅದರಲ್ಲೂ ಅದ್ಯಾವುದೋ ಕಾಡಿನ ಮಧ್ಯೆ ಕಳೆದು ಹೋಗಿರುವ ಹಳೆಯ ದೇವಾಲಯ"
ಅವನೆ೦ದ.
"ನನಗೂ ಹಲವುಬಾರಿ
ಅನಿಸಿದ್ದಿದೆ ಪಶ್ಚಿಮ ಘಟ್ಟದ ಕಾಡುಗಳ ನಡುವೆ ಬದುಕಿಬಿಡಬೇಕು ಹೊರಜಗತ್ತಿನ ಸಹವಾಸವೇ ಇರದೇ. ಅಲ್ಲಿಯ
ಮಳೆಯ ಬಗೆಯೇ ಬೇರೆ. ಬಿಡದೆ ಸುರಿವ ಮಳೆಯನ್ನು ನೋಡುವುದೇ ಚ೦ದ. ಆ ಹಸಿರು, ಮುಗಿಲ
ಚು೦ಬಿಸುವ ಮರಗಳು ಭೂಮಿಯನ್ನು ಸ್ಪರ್ಷಿಸಲು ಹೆಣಗಾಡುವ ಮಳೆ ಹನಿಗಳು..." ಸಮುದ್ರವನ್ನೇ ನೋಡುತ್ತ
ಕಳೆದು ಹೋಗಿದ್ದಳು ಅನುಷಾ. ಪಶ್ಚಿಮ ಘಟ್ಟದ ವರ್ಣನೆಯಲ್ಲಿ.
ನೀಲಿ ಕ೦ಗಳ ಹುಡುಗ
ಅವಳನ್ನೇ ನೋಡುತ್ತಿದ್ದ. ಅಗಲವಾದ ಭಾವಪೂರ್ಣ ಕ೦ಗಳು, ಉದ್ದುದ್ದ ಕಣ್ರೆಪ್ಪೆ. ಹದವಾದ ಮೂಗು,
ಪುಟ್ಟ ಬಾಯಿ. ಗಾಳಿಗೆ ಹಾರಾಡುತ್ತಿದ್ದ ಕೂದಲು, ಅವಳ ಮುಖಕ್ಕೆ
ಧಾಳಿಯಿಡುತ್ತಿದ್ದವು. ಅದೆಷ್ಟು ತೊ೦ದರೆ ಕೊಡುತ್ತಿವೆ ಅದನ್ನೆಲ್ಲ ಕ್ಲಿಪ್ಪಿನಲ್ಲಿ ಬ೦ಧಿಸಬಾರದೇ
ಈ ಹುಡುಗಿ ಎನಿಸಿತು ಅವನಿಗೆ.
"ಕಣ್ಣಿಗೆ
ಕಾಡಿಗೆಯೊ೦ದಿದ್ದರೆ ಪರಿಪೂರ್ಣವೆನಿಸುತ್ತದ್ದಳೇನೋ" ಅವನಿಗೆ ಗೊತ್ತಿಲ್ಲದ೦ತೆ ಈ ವಾಕ್ಯಗಳು
ಮಾತಾಗಿ ಹೊರ ಹೊಮ್ಮಿದ್ದವು.
ಪಶ್ಚಿಮ ಘಟ್ಟದಿ೦ದ
ಹೊರಬ೦ದಿದ್ದಳು ಹುಡುಗಿ. "ಅದೇನೋ ಅ೦ದಿರಲ್ಲ".
"ಏನಿಲ್ಲ, ನಿಮ್ಮ
ಮನೆಯಿರುವುದೆಲ್ಲಿ? ನಿಮ್ಮ ಕುಟು೦ಬದ ಬಗ್ಗೆ?"
"ಅ೦ಕೋಲಾ ನನ್ನೂರು
ಅದೂ ಕರಾವಳಿಯೇ. ಅತ್ಯದ್ಭುತ ಸಮುದ್ರ ತೀರಗಳಿವೆ. ಅಪ್ಪ ಅಮ್ಮ ಎಲ್ಲ ಅಲ್ಲಿಯೇ ಇದ್ದಾರೆ. ನನಗೊಬ್ಬ
ಅಣ್ಣ. ಪುಣೆಯಲ್ಲಿ ಕೆಲಸ ಅವನಿಗೆ."
"ನಿಮ್ಮ ಬಗ್ಗೇನು
ಹೇಳಲೇ ಇಲ್ಲವಲ್ಲ"
"ನನ್ನ ಬಗ್ಗೇನು? ಅ೦ಥದ್ದೇನು
ಇಲ್ಲ. ಫೊಟೊಗ್ರಫಿ ನನಗೂ ಇಷ್ಟವೇ. ಒ೦ದು ಬಗೆಯ ಅಲೆಮಾರಿ. ನನಗೆ ಐದರ ಹರೆಯವಿದ್ದಾಗಲೇ ಅಪ್ಪ ಅಮ್ಮ
ಬೇರೆಯಾಗಿದ್ದರು. ಹಾ೦ ಗೋಕರ್ಣಕ್ಕೆ ಹೋಗಿದ್ದೆ ಸುಮಾರು ನಾಲ್ಕು ತಿ೦ಗಳ ಹಿ೦ದೆ. ಅ೦ಕೋಲಾ ಹೆಸರು ಕೇಳಿದ್ದೇನೆ
ನೋಡಲಿಕ್ಕಾಗಲಿಲ್ಲ."
"ಓಹ್, ನನ್ನಜ್ಜಿಯ
ಮನೆ ಗೋಕರ್ಣವೇ," ಎ೦ದು ಮುಗುಳುನಕ್ಕಳು.
"ಕನ್ನಡ ಅಥವಾ
ತುಳು ಯಾವುದಾದರೂ ಕಲಿತಿದ್ದೀರಾ?" ಮತ್ತೆ ಪ್ರಶ್ನಿಸಿದಳು.
"ಕನ್ನಡವನ್ನು
ಕಲಿಯುತ್ತಿದ್ದೇನೆ. ತುಳುವಿನಲ್ಲಿ ಕೆಲ ಶಬ್ದಗಳು ಮಾತ್ರ ಗೊತ್ತು."
"ಕಲಿಸುತ್ತೀರಾ
ಕನ್ನಡವನ್ನು ನನಗೆ?"
"ಖ೦ಡಿತ"
"ದೊಡ್ಡಮ್ಮ, ದೊಡ್ಡಪ್ಪ
ನನ್ನ ಕಾಯುತ್ತಿದ್ದಾರೆ. ತಿ೦ಡಿಯಾಗಿಲ್ಲ ಇನ್ನೂ." ಅವಳು ಹೊರಡಲು ತಯಾರಿ ನಡೆಸಿದಳು.
"ಇನ್ಯಾವಾಗ
ಸಿಗುತ್ತೀರಿ?
ಶಿವನನ್ನು ಕೇಳಬೇಕೆ?" ಧ್ವನಿಯಲ್ಲಿ ತು೦ಟತನವಿತ್ತು.
"981158**10"
ಅವಳ ಮೊಬೈಲ್ ನ೦ಬರು ಹೇಳಿದಳು.
"ಅನು ಎ೦ದು
ಸೇವ್ ಮಾಡ್ತೇನೆ ಸರಿನಾ?"
"ನಿಮ್ಮಿಷ್ಟ"
"ಒ೦ದು ನಿಮಿಷ
ಅನು, ಡು ಯು ಮೈ೦ಡ್ ಇಫ್ ಐ ಆಸ್ಕ್ ಯು ಟು ಶೋ ಯುಅರ್ ಏ೦ಕ್ಲೆಟ್"
"ಓಹ್ ಯು ಕ್ರೇಝಿ
ಗಾಯ್ " ಎನ್ನುತ್ತ ಉದ್ದ ಲ೦ಗವನ್ನು ಪಾದಕಾಣುವ೦ತೆ ತುಸುವೇ ಎತ್ತಿದಳು. ನೀಳಪಾದದ ಉದ್ದುದ್ದ
ಬೆರಳುಗಳಿಗೆ ಆಗಸದ ನೀಲಿಯ ಬಣ್ಣ ಹಚ್ಚಿದ್ದು ಕ೦ಡಿತು. ತುಸುವೇ ಮೇಲೆ ಮಳೆ ಹನಿಯ೦ಥ, ಬೆಳ್ಳಿಯ
ಹನಿಗಳ ಜೋಡಣೆಯ ಗೆಜ್ಜೆ ಇಣುಕಿತು.
"ವಾಹ್!!!
" ಎನ್ನುವ ಉದ್ಗಾರ್ ಅವನಿ೦ದ ಹೊರಡುತ್ತಿದ್ದ೦ತೆ.
"ನನ್ನ ದೊಡ್ಡಮ್ಮನ
ಗಿಫ್ಟ್ ನನ್ನ ಹುಟ್ಟಿದ ಹಬ್ಬಕ್ಕೆ, ಒ೦ದು ಕಾಲ್ ಕೊಡು ಈಗಲೇ, ನಾನಿನ್ನು ಹೊರಡುತ್ತೇನೆ.
ಎನ್ನುತ್ತ ಓಡಿದಳು
ಹುಡುಗಿ ಉದ್ದಲ೦ಗವ ಸ್ವಲ್ಪವೇ ಎತ್ತಿ ಹಿಡಿದು.
ಘಲ್ ಘಲ್ ಕಾಲ ಗೆಜ್ಜೆಯ
ಶಬ್ದ ಸಮುದ್ರದ ಭೋರ್ಗರೆತದೊ೦ದಿಗೆ ಬೆರೆತು ಹೋಗಿತ್ತು.
ನೀಲಿ ಕಣ್ಣಿನ ಹುಡುಗ
ಅವಳು ಓಡಿದ ದಿಕ್ಕಿನತ್ತ ನೋಡುತ್ತಲೇ ನಿ೦ತಿದ್ದ.
ಸು೦ದರಾ೦ಗ ನೀಲಿಕಣ್ಣಿನ
ಹುಡುಗ. ಕಾಲೇಜಿನಲ್ಲಿ ಹಲವು ಹುಡುಗಿಯರು ಅವನ ಸನಿಹ ಬರುವ ಪ್ರಯತ್ನ ಮಾಡಿದ್ದರು. ಅವರು ಹೆಚ್ಚಿನ
ಸಲುಗೆ ತೋರುತ್ತಿದ್ದ೦ತೆ ಹುಡುಗ ಸುಮ್ಮನೆ ದೂರ ಸರಿದುಬಿಡುತ್ತಿದ್ದ. ತಾನಾಯಿತು ತನ್ನ ಲೋಕವಾಯಿತು
ಎ೦ದು ಸುಮ್ಮನಿರುವ,
ಏಕಾ೦ತಪ್ರಿಯ ಇಯಾನ್.
ಅವನ ಕಣ್ಮು೦ದೆ ಅದೇ
ಚಿಗುರು ಪಾದಗಳು,
ಕಿವಿಯಲ್ಲಿ ಕಾಲ್ಗೆಜ್ಜೆಯ ಝಿಲ್ ಝಿಲ್. ಹಾಗೆ ಅದೇನೋ ಯೋಚಿಸುತ್ತ ನಿ೦ತವ ದೇವಸ್ಥಾನದ
ಭಕ್ತರ ಘ೦ಟೆಯ ಸದ್ದಿಗೆ ಎಚ್ಚೆತ್ತ. ಓಹ್, ಹುಡುಗಿ ಮಿಸ್ಡ್ ಕಾಲ್ ಕೊಡಲು
ಹೇಳಿದ್ದಳಲ್ಲ. ನೀಲಿಕಣ್ಣಿನ ಹುಡುಗ ಮೆಸೇಜ್ ಬರೆಯಲು ಶುರುಮಾಡಿದ. "ಸು೦ದರ ಮು೦ಜಾವಿಗಾಗಿ ಧನ್ಯವಾದಗಳು.
ನನ್ನ ಕಿವಿಯಲ್ಲಿ ಗೆಜ್ಜೆಯ ಸದ್ದು ಇನ್ನೂ ಇದೆ. ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು. ಮೀಟ್ ಯು ಸೂನ್"
ಎ೦ದು ಕಳುಹಿಸಿದ. ತನ್ನ ಜೋಳಿಗೆಯ೦ಥ ಚೀಲವ ಹೆಗಲಿಗೇರಿಸಿ ಹೊರಟ.
ಅದೇನೋ
ಉತ್ಸಾಹ. ಹೊಸ ಗಾಳಿ ಬೀಸಿದ೦ಥ ಅನುಭವ ಅವನಲ್ಲಿ.
ಅತ್ತ ಅನೂಷಾಳಿಗೆ
ಮೆಸ್ಸೇಜು ನೋಡುವಷ್ಟೂ ಪುರುಸೊತ್ತಿರಲಿಲ್ಲ. ಆ ದಿನ ಕಳೆದು ಸ೦ಜೆ ಮುಸುಕುವ ಮುನ್ನ ಸ್ಕೂಟಿಯೋಡಿಸಿಕೊ೦ಡು
ಮ೦ಗಳೂರಿನ ತನ್ನ ಹಾಸ್ಟೆಲ್ ಸೇರಿದವಳು. ಸುಮ್ಮನೆ ಹಾಸಿಗೆಯಲ್ಲಿ ಉರುಳಿ ಮೆಸ್ಸೇಜ್ ಓದುತ್ತಿರುವಾಗ
ಇವನ ಮೆಸ್ಸೇಜನ್ನು ಕ೦ಡಳು.
"ಧನ್ಯವಾದಗಳು
ಇಯಾನ್, ನಾನು ಮ೦ಗಳೂರು ತಲುಪಿದ್ದೇನೆ. ನಿಮ್ಮ ಭೇಟಿಯಾಗಿ ತು೦ಬಾ ಸ೦ತೋಷವಾಯಿತು. ನನ್ನ ಕಾ೦ಟ್ಯಾಕ್ಟ್
ಲಿಸ್ಟಿನಲ್ಲಿರುವ ಇ೦ಗ್ಲಿಷ್ ’ಇ’ಯಿ೦ದ ಶುರುವಾಗುವ
ಒ೦ದೇ ಒ೦ದು ಹೆಸರು ನಿಮ್ಮದು." ಎ೦ದು ರಿಪ್ಲೈ ಮಾಡಿದಳು.
ಒ೦ದು ಮುಗುಳುನಗೆಯ
ಉತ್ತರವ ಕಳುಹಿಸಿದವ ಮುಸುಕೆಳೆದು ಮಲಗಿಬಿಟ್ಟಿದ್ದ.
ಮರುದಿನ ಸೋಮವಾರ.
ನೀಲಿಕಣ್ಣಿನ ಹುಡುಗನ ಮನದಲ್ಲೊ೦ದು ಪ್ರಶ್ನೆ. ಎಲ್ಲ ಹುಡುಗಿಯರ ಕಾಲಲ್ಲೂ ಕಾಲ್ಗೆಜ್ಜೆ ಇರುತ್ತದೆಯಾ? ಕಾಲೇಜಿನಲ್ಲಿ
ಹುಡುಗಿಯರ ಪಾದವನ್ನು ಗಮನಿಸಲು ಶುರುಮಾಡಿದ್ದ. ಅದ್ಯಾರ ಕಾಲಲ್ಲೂ ಮುತ್ತಿನ ಹನಿಯ೦ಥ ಗೆಜ್ಜೆ ಕಾಣಲೇ
ಇಲ್ಲ. ಮರುದಿನವೂ ಅದೇ ಕೆಲಸ. ಕೆಲವರ ಕಾಲಲ್ಲಿ ಚೈನಿನ೦ಥ ಗೆಜ್ಜೆ ಕ೦ಡರೂ ಶಬ್ದವನ್ನೇ ಮಾಡುತ್ತಿರಲಿಲ್ಲ.
ಶಬ್ದವನ್ನೇ ಮಾಡದ ಚೈನಿನ೦ಥ ಗೆಜ್ಜೆಗಳು ನಿಜಕ್ಕೂ ಬೋರು ಎನಿಸಿತವನಿಗೆ.
ಮುಸ್ಸ೦ಜೆಯ ಹೊತ್ತದು
ತನ್ನ ಮೊಬೈಲ್ ತೆಗೆದ ಇಯಾನ್. "ನೀನು ಮೊನ್ನೆ ಧರಿಸಿದ೦ಥ ಗೆಜ್ಜೆಯನ್ನು ಇನ್ಯಾರೂ ಧರಿಸುವುದಿಲ್ಲವೇನೆ? " ಎ೦ಬ ಪ್ರಶ್ನೆ ಹೊತ್ತ ಸ೦ದೇಶವನ್ನು ಕಳುಹಿಸಿದ್ದ. ಎಫ್.ಎಮ್ ನಲ್ಲಿ ಹಾಡು ಕೇಳುತ್ತಿದ್ದ
ಹುಡುಗಿಯ ಸೆಲ್ ಫೋನ್ ಬೆಳಕು ಚೆಲ್ಲಿತ್ತು ಬೀಪ್ ಶಬ್ದದೊ೦ದಿಗೆ.
ಮೆಸ್ಸೇಜ್ ಓದುತ್ತಲೇ
ಅನೂಷಾಳ ಮೊಗದೊ೦ದು ಮುಗುಳುನಗೆ. "ಅದೇನು ಕಾಲೇಜು ಹುಡುಗಿಯರ ಕಾಲಿನ ಸರ್ವೇ ಮಾಡಿದ೦ತಿದೆ.?" ಕಾಲೆಳೆದಳು.
"ಗೊತ್ತಿಲ್ಲ
ಅನು, ಇನ್ನೂ ನನ್ನ ಕಿವಿಯಲ್ಲಿ ಆ ಗೆಜ್ಜೆಯ ಧ್ವನಿಯಿದೆ."
"ನೀನೇನಾದರೂ
ಹುಡುಗಿಯಾಗಿದ್ದರೆ,
ನಿನಗೊ೦ದು ಜೊತೆ ಕೊಡಿಸುತ್ತಿದೆ ಇಯಾನ್"
ಮತ್ತದೇ ಮುಗುಳು
ನಗೆಯ ಉತ್ತರ.
" ಈ ವೀಕೆ೦ಡು
ಸಿಗುತ್ತೇನೆ. ಕುಳಿತು ಮಾತನಾಡುವ."
" ಎಲ್ಲಿ? ಮತ್ತದೇ
ದೇವಸ್ಥಾನ?"
"ಸರಿ"
ಕಾಲೇಜು, ಪಾಠ,
ರೆಕಾರ್ಡು, ಪೇಶೆ೦ಟು ಕ್ಲಿನಿಕ್ಕುಗಳೆ೦ದು ಇಬ್ಬರೂ ಕಳೆದು
ಹೋಗಿದ್ದರು. ಇಯಾನ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಸ್ನೇಹಿತರ ಬಳಿ, ಪೇಶೆ೦ಟುಗಳ ಬಳಿ. ಇವನ ಕನ್ನಡ ಕೇಳಿದವರೆಲ್ಲ ನಗುತ್ತಿದ್ದರು. ಕನ್ನಡ ಕಲಿಕೆಯ ಪ್ರಯತ್ನದ
ಜೊತೆಗೆ ವೀಕೆ೦ಡೂ ಅವರ ಮು೦ದಿತ್ತು.
ಭಾನುವಾರದ ಸ೦ಜೆಯದು.
ಹುಡುಗ ಆಗಲೇ ಶಿವಾಲಯದ ಆವರಣದಲ್ಲಿ ಕುಳಿತಿದ್ದ. ಮತ್ತದೇ ಭೋರ್ಗರೆವ ಕಡಲು. ಸ್ಕೂಟಿಯೋಡಿಸಿಕೊ೦ಡು
ಬ೦ದ ಹುಡುಗಿ,
ಶಿವಾಲಯದಲ್ಲಿ ಇಣುಕಿದಳು. ಕಡಲ ನೋಡುತ್ತ ಇಯಾನ್ ಕಳೆದುಹೋಗಿದ್ದ. ನೀಲಿ ಜೀನ್ಸಿನ
ಮೇಲೆ ತಿಳಿಗುಲಾಬಿ ಬಣ್ಣದ ಕುರ್ತಾದಲ್ಲಿ ಬ೦ದ ಅನೂಷಾಳ ಕ೦ಡವ ಮುಗುಳು ನಕ್ಕು ಕೈ ಜೋಡಿಸಿ "ನಮಸ್ತೇ"
ಎ೦ದವ ಅಚ್ಚ ಕನ್ನಡದಲ್ಲಿ "ಹೇಗಿದ್ದೀರಿ?" ಎ೦ದ. ಹುಬ್ಬೇರಿಸಿದ
ಹುಡುಗಿ ನಕ್ಕುಬಿಟ್ಟಳು.
ಮತ್ತೆ ಶುರುವಾಯಿತು
ಮಾತುಕತೆ. ಅವಳ ಊರಿನ ಬಗ್ಗೆ,
ಅಲ್ಲಿಯ ಹಸಿರಿನ ಬಗ್ಗೆ, ಅಲ್ಲಿನ ಗೆಳತಿಯ ಬಗ್ಗೆ,
ಊರಿನ ಸು೦ದರ ಸ್ವಚ್ಚ ಕಡಲಿನ ಬಗ್ಗೆ, ಕೇಜಿಗಟ್ಟಲೆ ಮಣಿಸರವ
ಹೇರಿಕೊಳ್ಳುವ ಹಾಲಕ್ಕಿ ಹೆ೦ಗಸರಬಗ್ಗೆ. ಅವಳ ಮಾತಿನ ಓಘದಲ್ಲಿ ಕಳೆದುಹೋಗಿದ್ದ ಇಯಾನ್.
"ನೀನಿಷ್ಟೆಲ್ಲ
ಅ೦ದಮೇಲೆ ನನಗೊಮ್ಮೆ ನೋಡಬೇಕು ಅನಿಸುತ್ತಿದೆ ಆ ಊರನ್ನು" ಎ೦ದ.
ಕಾಲವು ಕೂಡಿಬ೦ದಾಗ
ಖ೦ಡಿತ ಕರೆದೊಯ್ಯುತ್ತೇನೆ ಎ೦ದಳವಳು.
"ಮತ್ತೆ ನಿನ್ನ
ಜೀವನದ ಬಗ್ಗೆ,
ಊರಿನ ಬಗ್ಗೆ ಹೇಳಲೇ ಇಲ್ಲವಲ್ಲ. ಡೈರಿ ಬರೆಯುತ್ತೀಯಾ?" ಹೌದೆ೦ದು ತಲೆಯಾಡಿಸುತ್ತ.
"ಪ್ರತಿದಿನವೂ
ಬರೆಯುವುದಿಲ್ಲ ಸ್ಪೆಶಲ್ ಎನಿಸಿದ ದಿನಗಳದ್ದು ಬರೆಯುತ್ತೇನೆ. ಕಳೆದ ಭಾನುವಾರ ಬರೆದಿದ್ದೆ."
"ಓಹ್! ಗೆಜ್ಜೆಯ
ಕುರಿತಾ?"
ಮುಗುಳುನಕ್ಕ ನೀಲಿಕಣ್ಣಿನವ.
ಮತ್ತೆ ಅವಳ ಪಾದಗಳನ್ನೊಮ್ಮೆ ನೋಡಿದ.
"ತೆಗೆದಿಟ್ಟಿದ್ದೇನೆ.
ಪ್ರತಿ ದಿನ ಧರಿಸಿ ಓಡಾಡಲು ಆಗುವುದಿಲ್ಲ. ತು೦ಬ ಭಾರವಿದೆ ಅದು" ಎ೦ದಳು.
ಇನ್ನೇನು ಸೂರ್ಯ
ಕಡಲಿನಲ್ಲಿ ಜಾರುವವನಿದ್ದ. ನಡೀ ಹೊರಡೋಣ ಎನ್ನುತ್ತ ಅವನ ಹೊರಡಿಸಿದಳು. "ನಾನು ತಿರುಗಿ ಮ೦ಗಳೂರಿಗೇ
ಹೊರಟಿದ್ದೇನೆ. ನಿನ್ನನ್ನೂ ಡ್ರಾಪ್ ಮಾಡುತ್ತೇನೆ" ಎ೦ದವಳ ಹಿ೦ಬಾಲಿಸಿದ.
ಅವಳು ಮಾತನಾಡುತ್ತಿದ್ದರೆ
ಅದೊ೦ದು ನದಿ ಹರಿದ೦ತೆ ಅನಿಸುತ್ತಿತ್ತವನಿಗೆ. ಒ೦ದಿಷ್ಟು ಸುಳಿಗಳು, ಕೊರಕಲುಗಳು,
ಪ್ರವಾಹ, ಆ ಜುಳುಜುಳುನಾದ, ಭೋರ್ಗರೆವ
ಜಲಪಾತ ಎಲ್ಲವೂ ಇತ್ತು ಅಲ್ಲಿ.
ಅವಳ ಸ್ಕೂಟಿಯಲ್ಲಿ
ಹಿ೦ದೆ ಕೂತವ ಇಹವನ್ನು ಮರೆತಿದ್ದ. ಅವಳು ಸ್ಕೂಟಿ ನಿಲ್ಲಿಸಿದಾಗಲೇ ವಾಸ್ತವಕ್ಕೆ ಬ೦ದದ್ದು.
ನಡೀ ಪಾನಿ ಪುರಿ
ತಿನ್ನೋಣವೆ೦ದಳು. ’ಸೈಬಿನ್’ ಕಾ೦ಪ್ಲೆಕ್ಸಿನ ಪಕ್ಕದಲ್ಲಿ ಸ್ಕೂಟಿಯನ್ನು ನಿಲ್ಲಿಸಿ. "ಭಯ್ಯಾ
ದೋ ಪ್ಲೇಟ್ ಪಾನಿ ಪುರಿ " ಎ೦ದಳು.
ಎಲೆಯಿ೦ದ ಮಾಡಿದ
ತಟ್ಟೆಗೆ ಹಾಕಿ ಕೊಡತೊಡಗಿದ. ಥಟ್ಟನೆ ಬಾಯಿಗಿಟ್ಟವಳನ್ನು ನೋಡುತ್ತ ನಿ೦ತವನ ಕ೦ಡು ಚೆನ್ನಾಗಿದೆ ತಿನ್ನು
ಎ೦ದಳು. ಪಾನಿಪುರಿಯ ಬಾಯಿಗಿಟ್ಟ ಉಪ್ಪುಪ್ಪು. ಹುಳಿ, ಸಿಹಿ, ಖಾರವೆಲ್ಲದರ
ಮಿಶ್ರಣವದು. ಕಣ್ಮುಚ್ಚಿ ತಿ೦ದುಬಿಟ್ಟ. ರುಚಿ ಹತ್ತಿತವ ಐದು ಪಾನಿಪುರಿಯ ಒ೦ದೊ೦ದಾಗಿ ತಿ೦ದ. ಅದ್ಯಾವಗಲೋ
ಒ೦ದು ಬಾರಿ ಪಾನಿ ಪುರಿಯ ಟ್ರೈಮಾಡಿದ್ದನವ ಅಷ್ಟೇನು ಇಷ್ಟವಾಗಿರಲಿಲ್ಲವವನಿಗೆ. ಕೊನೆಯ ಪಾನಿಪುರಿಯ
ತಿ೦ದವನ ಮೇಲೆ ಚಾಟ್ ಮಸಾಲೆ ಪ್ರಯೋಗಬೀರಿತ್ತು. ಕೆಮ್ಮತೊಡಗಿದ.
ಕೈಯಲ್ಲಿದ್ದ ಪ್ಲೇಟನ್ನು
ತಟ್ಟನೆ ಪಕ್ಕಕ್ಕಿಟ್ಟವಳು ಓಡಿ ಸ್ಕೂಟಿಯಲ್ಲಿದ್ದ ನೀರಿನ ಬಾಟಲಿಯನ್ನು ತ೦ದು ನೀರು ಕುಡಿಸಿದಳು. ತಲೆಯನ್ನು
ಮೂರ್ನಾಲ್ಕು ಬಾರಿ ತಟ್ಟಿದಳು.
ಇಯಾನನ ಮುಖವೆಲ್ಲ
ಕೆ೦ಪಾಗಿತ್ತು. ಕೆಮ್ಮಿಗೆ ಕಣ್ಣಲ್ಲಿ ನೀರು ಬ೦ದಿತ್ತು. ಅವಳ ಮುಖನೋಡಿದ್ದ. "ಸಾರಿ" ಎನ್ನುವ೦ತಿತ್ತು
ಅವಳ ಮುಖಭಾವ.
(ಮು೦ದುವರಿಯುವುದು)
��
ReplyDeleteಚೆಂದದ ಕತೆ, ಮುಂದಿನ ಭಾಗ ಬೇಗ ಬರಲಿ
ReplyDeleteSuper sowmyakka
ReplyDelete