Friday, July 13, 2012

ಚಿಕನ್ ಪಾಕ್ಸೂ, ನನ್ನ ಮಿನಿ ಮಜ್ಜನವೂ ...



Blog ನಲ್ಲಿ ಏನೂ ಬರೆಯದೆ ಬಹಳ ದಿನಗಳೇ ಕಳೆದು ಹೋದವು. ನನಗೆ ಬರೆಯಲು ವಿಷಯಗಳು ನೆನಪಾಗುವುದು ಬಚ್ಚಲ ಮನೆಯಲ್ಲಿ ಸ್ನಾನ ಮಾಡುವಾಗಲೇ..! ತಲೆಯ ಮೇಲೆ ನೀರು ಬಿದ್ದಾಗಲೇ ಹೊಸ ವಿಷಯಗಳು ತಲೆಯೊಳಗೆ ಬರುವುದು..! ಇಂತಿಪ್ಪಾಗ ಹದಿನೆಂಟು ದಿನಗಳ ಕಾಲ ಸ್ನಾನವೇ ಇಲ್ಲದಿದ್ದಾಗ ಬರೆಯುವುದಾದರೂ ಹೇಗೆ ನೀವೇ ಹೇಳಿ ? ಇರಲಿ ಬಿಡಿ ವಿಷಯಕ್ಕೆ ಬರುತ್ತೇನೆ.


ಪರೀಕ್ಷೆಯ ಮುಗಿಸಿಕೊಂಡು ಬಂದ ಖುಷಿಯಲ್ಲಿ ಅಜ್ಜಿಮನೆಗೆ ನನ್ನ boy friend (ಕ್ಯಾಮೆರ) ಜೊತೆ ಹೋಗಿ ಮನೆಗೆ ಬಂದ ನನಗೆ ಸಣ್ಣಗೆ ತಲೆ ನೋವು, ಜ್ವರ . (ಹಾಗೆಲ್ಲ ಸುಮ್ಮನೆ ತಲೆ ನೋವು ಬರುವುದಿಲ್ಲ ಮಾರಾಯ್ರೆ. 'ತಲೆ' ಇದ್ದವರಿಗೆ ಮಾತ್ರ ತಲೆನೋವು ಬರುವುದಂತೆ.!).  ಮಲೆನಾಡಿನ ಮಳೆಯಂತೆ ಮಾತನಾಡುವವಳು ಬಯಲು ಸೀಮೆಯ ಮಳೆಯಾಗಿಬಿಟ್ಟಿದ್ದೆ. ಕ್ಯಾಮೆರಾದ ಜೊತೆ ಅಲೆದದ್ದು ಜಾಸ್ತಿಯಾಯಿತೆಂದು ಪಪ್ಪ ಗೊಣಗುತ್ತಲೇ 'ಚಂದ್ರು' ಡಾಕ್ಟರರ ಬಳಿ ನನ್ನ ಕರೆದೊಯ್ಯಲು ತಯಾರಾದರು.  ಅದೇನೋ ಒಂದು ಬಗೆಯ ಅಲರ್ಜಿ ಈ ಡಾಕ್ಟರಗಳೆಂದರೆ, ಅವರ ಗುಳಿಗೆಗಳೆಂದರೆ, ಚುಚ್ಚುವ ಸೂಜಿಗಳ ಕಂಡರೆ.! ಬಟ್ಟೆ ಬದಲಿಸಲು ಹೊರಟಾಗಲೇ ನನ್ನ ಎಡಗೈ ತೋಳಮೇಲೆ ಕಂಡದ್ದು ಸುಟ್ಟ ಗುಳ್ಳೆ.! ನಾನೆಲ್ಲಿ ಬಿಸಿ ಎಣ್ಣೆಯ ಸಿಡಿಸಿಕೊಂಡಿದ್ದೇನೆ ಎಂದು ಯೋಚಿಸುತ್ತಲೇ ಅಮ್ಮನಿಗೆ ತೋರಿಸಿದರೆ ಅಮ್ಮ  "ಅಯ್ಯೋ ನಿನಗೆಲ್ಲಿಂದ ಬಂತೇ ಇದು.! chickenpox ಗುಳ್ಳೆ ಇದು "ಎಂದು declare ಮಾಡಿಬಿಟ್ಟರು..! 


ಡಾಕ್ಟರರು chickenpox ಎಂದು confirm ಮಾಡಿ 3 ಇಂಜೆಕ್ಷನ್ ಚುಚ್ಚಿದರು.( ಹತ್ತನೇ ತರಗತಿಯಲ್ಲಿ TT ಇಂಜೆಕ್ಷನ್ ತೆಗೆದುಕೊಂಡ ನಂತರ ತೆಗೆದುಕೊಂಡ ಹ್ಯಾಟ್ರಿಕ್ ಇಂಜೆಕ್ಷನ್ಸ್ ಇವು). ಅದೃಷ್ಟ ಬಂದರೆ ಒದ್ದು ಬರುವುದಂತೆ ಹಾಗೆ ದುರಾದೃಷ್ಟವು ಕೂಡ.!.(chickenpox ನಿನ್ನ ವೇದಾಂತಿಯನ್ನಾಗಿ ಮಾಡಿದೆ ಅಂತೀರಾ? ) ಅಷ್ಟಕ್ಕೇ ಸುಮ್ಮನಿರದ ಚಂದ್ರು ಡಾಕ್ಟರರು ಪಥ್ಯವನ್ನು ಹೇಳಿಯೇ ಬಿಟ್ಟರು. "ನಂಜಿನದನ್ನೇನು ಕೊಡಬೇಡಿ, ಚಪ್ಪೆ ಊಟ, ಹಣ್ಣುಗಳನ್ನು ತಿನ್ನಬಹುದು."  "ಮಾವಿನ ಹಣ್ಣು ತಿನ್ನಬಹುದಾ ?" ಇಂಜೆಕ್ಷನ್ ತೆಗೆದುಕೊಂಡ ನೋವಿನ ಎಡೆಯಲ್ಲೂ ನನ್ನ ಪ್ರಶ್ನೆ. "ಏನು ಮಾವಿನ ಹಣ್ಣಾ? " ಎನ್ನುತ್ತಾ ಇಲ್ಲ ಎಂದು ತಲೆ ಆಡಿಸಿ ಬಿಟ್ಟಿದ್ದರು.! ಮನೆಯಲ್ಲಿ ನನ್ನ ರೂಮಿನ ಪಕ್ಕದ ರೂಮಿನಲ್ಲಿ ನನಗಾಗಿ ಕಾಯುತ್ತಿರುವ ಬಂಗಾರದ ಬಣ್ಣದ ಮಾವಿನ ಹಣ್ಣುಗಳು ನನ್ನ ಅವಸ್ಥೆಯ ನೋಡಿ ಕಣ್ಣೀರಿಟ್ಟ೦ತೆ ಅನಿಸಿತು ನನಗೆ.! ಮಳೆಗಾಲದಲ್ಲಿ ಸುರಿಯುವ ಮಳೆಯನ್ನೂ ಕಿಟಕಿಯಿಂದ ನೋಡುತ್ತಾ ಹಲಸಿನ ಚಿಪ್ಸ್, ಹಲಸಿನ ಹಪ್ಪಳ-ಕಾಯಿಬೆಲ್ಲ ತಿನ್ನುವ ನನ್ನ ಕನಸಿನೆ ಬಲೂನಿಗೆ ಸೂಜಿ ಚುಚ್ಚಿದ ಅನುಭವ.!




ಈ ಪ್ರಸಂಗದ ಎರಡನೇ ಅಧ್ಯಾಯ ಶುರುವಾದದ್ದು ಮನೆಗೆ ಬಂದಮೇಲೆ. ರಾತ್ರಿಯಾಗುವುದರೊಳಗೆ ಆಗಸದಲ್ಲಿ ನಕ್ಷತ್ರಗಳು ತುಂಬಿಕೊಂಡಂತೆ ನನ್ನ ಮುಖದಮೇಲೆ ಸೂಜಿಯ ಮೊನೆಯಿಡಲೂ ಆಗದ ಹಾಗೆ ಗುಳ್ಳೆಗಳು ತುಂಬಿ ಹೋದವು.! ಒಂದುಬಗೆಯ ಉರಿ,  ತುರಿಕೆ ಬೇರೆ. ಹೇಳಲಸಧ್ಯಾವಾಗದ ವೇದನೆ.ಅಷ್ಟರಲ್ಲಿ "ಉಪ್ಪು ಹಾಕಡ, ಚಪ್ಪೆ ಗಂಜಿ, ಹೆಸರು ಕಟ್ಟು (ಬೇಯಿಸಿದ ಹೆಸರು ಬೇಳೆ), ನಂಜಿನ ವಸ್ತು ಬದಿಗೂ ತಕಹೋಗಡ" ಅಜ್ಜ-ಅಜ್ಜಿ ಇಬ್ಬರಿಂದಲೂ ಕಟ್ಟಪ್ಪಣೆ ನನ್ನ ಅಮ್ಮನಿಗೆ.! ಸ್ನೇಹಿತರಿಗೆಲ್ಲ ಫೋನು ಮಾಡಿ ಸಾರಿಯಾಯಿತು. "ನಂಗೆ chickenpox.... ".  ಒಬ್ಬ ಗೆಳತಿ " ಕೋಳಿಯನ್ನು, ಕೋಳಿ ಮೊಟ್ಟೆಯನ್ನು ಬಿಡು, ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನದ ನಿನ್ನಂಥ ಆಸಾಮಿಗೆ ಅದೆಲ್ಲಿಂದ 'chickenpox' ಬಂತೇ? " ಹೌದು ಎಲ್ಲ ಗೆಳೆಯರೆದುರಿಗೂ ನಾನು '200% ವೆಜಿಟೇರಿಯನ್ ' ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನೋದಿಲ್ಲ. ಎಂದು ಹೇಳುತ್ತಿದ್ದೆ. ಸ್ನೇಹಿತರ ಹುಟ್ಟು ಹಬ್ಬಕ್ಕೆ ಎಲ್ಲರಿಗೂ ಕೇಕ್ ಆದರೆ ನನಗೆ ಚಾಕಲೇಟ್ ಇರುತ್ತಿತ್ತು.! ಹೀಗಿದ್ದ ನನಗೆ ಮಾಂಸಹಾರಿ ಹೆಸರಿನ ಖಾಯಿಲೆ..! ಇದಕ್ಕೇ ಹೇಳುವುದಿರಬೇಕು ವಿಪರ್ಯಾಸ ಎಂದು !!ಫೋನ್ ಮಾಡಿದ ಒಬ್ಬ ಗೆಳೆಯನಂತೂ "ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಬರೋ ಖಾಯಿಲೆ ಕಣೆ ಇದು, ನಿನಗೆಲ್ಲಿಂದ? ಆ varicella zoster virus (VZV) ಗೆ confuse ಆಗಿರಬೇಕು. ಅದರಲ್ಲೂ ನಿಂಗೆ wisdom tooth ಬೇರೆ ಬಂದಿಲ್ಲ. (wisdom toothಗೆ  ನಾನು 'ಬುದ್ಧಿವಂತ' ಹಲ್ಲು ಎಂದೇ ಹೇಳುವುದು. ಅದಕ್ಕೆ ಗೆಳೆಯರೆಲ್ಲ. ನಿಂಗೆ wisdom tooth ಬರೋಕೆ ಚಾನ್ಸೇ ಇಲ್ಲ ಬುದ್ಧಿ ಇರೋರಿಗೆ ಮಾತ್ರ ಅದು ಬರೋದು ಎಂದು ಯಾವಾಗಲೂ ಹೇಳ್ತಿರ್ತಾರೆ ) ಅಂದುಬಿಟ್ಟ.! ಇನ್ನೊಬ್ಬರು ಫೋನ್ ಮಾಡಿ ಹದಿನೈದು ದಿನ ಸ್ನಾನವಿಲ್ಲ ನೋಡು, ಪಾರ್ವತಿ ದೇವಿಯಂತೆ ಮಣ್ಣಿನ ವಿಗ್ರಹವನ್ನೆನಾದರೂ ಮಾಡುವ ಇರಾದೆ ಇದೆಯೋ ಎಂದೂ ಕೇಳಿ ಬಿಟ್ಟರು!ಆ ನೋವಿನಲ್ಲೂ ನಕ್ಕಿದ್ದೆ.
calamine ಹಚ್ಚಿದ ಮೇಲೆ ಉರಿಯ ಅನುಭವ ಶಮನವಾದಂತೆ ಅನಿಸಿದರೂ ಭಯಂಕರ ಎನಿಸುವ ನಿಶ್ಯಕ್ತಿ. ಹಾಸಿಗೆ ಬಿಟ್ಟು ನಾನು ಏಳದಂತೆ ಮಾಡಿತ್ತು. ಮಲಗಿದ್ದಾಗಲೂ ಸುತ್ತಲಿನ ಜಗತ್ತೆಲ್ಲ ತಿರುಗಿದಂತೆ ಕಂಡಾಗ, 'ಭೂಮಿ ತನ್ನ ಕಕ್ಷದ ಮೇಲೆ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತದೆ' ಎಂದು ಶಾಲಾ ದಿನಗಳಲ್ಲಿ ಓದಿದ್ದು confirm ಆಯಿತು.! ತಲೆಯ ಮೇಲೆಲ್ಲಾ ಎದ್ದಿದ್ದ ಗುಳ್ಳೆಗಳು ರಾತ್ರಿ ನಿದ್ದೆ ಮಾಡಲು ಬಿಡಬೇಕಲ್ಲ.! ಬುದ್ಧನ ಕುರಿತು ಹೇಳಿದ್ದ 'ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದಿದ್ದ' ನೆನಪಾಗಿ. ಬುದ್ಧನಿಗೂ chickenpox ಆಗಿತ್ತಾ ಅನ್ನೋ ಯೋಚನೆ ಬಂದು ಬಿಟ್ಟಿತ್ತು.! ಮಲಗಿದಲ್ಲೇ ಇದಕ್ಕೇ chickenpox ಎಂಬ ಹೆಸರು ಏಕೆ ಎಂಬ ಪ್ರಶ್ನೆ ಕೊರೆಯುತ್ತಿತ್ತು. ಅಮ್ಮನಲ್ಲಿ ಕೇಳಿದಾಗ. ಅಲ್ಲೇ ನೆಲ ಒರೆಸುತ್ತಿದ್ದ ನಾಗಮ್ಮಕ "ಇದು ಕೋಳಿಗೆ ಬತ್ತದೆರ, ಇದು ಬಂದಾಗ ಕೋಳಿ ಕೂರತೆ ಕೂತ್ಕತ್ತದೆ. ಎಂತದೂ ತಿನ್ನುದಿಲ್ಲ, ಗೋಧಿ ಹಾಕ್ಬೇಕು ಆಗ" ಎಂದಾಗ ನಾಗಮ್ಮಕ್ಕನ GK ಗೆ ಮನದಲ್ಲೇ ತಲೆದೂಗಿದ್ದೆ.


ಬೆಳಿಗ್ಗೆ ತಿಂಡಿಗೆ ಗೋಧಿಯ ದೋಸೆ ಅಥವಾ ಚಪಾತಿ, ಸಪ್ಪೆ ಊಟ, ಬೇಯಿಸಿದ ತರಕಾರಿಯ ಹೋಳುಗಳು, ಹಣ್ಣುಗಳು ಇವಿಷ್ಟೇ ನನ್ನ ಆಹಾರ. ಹಿಂದೆ ಕಾಮಾಲೆಯಾಗಿದ್ದಾಗ ತಿಂದು ತಿಂದು ಬೇಜಾರು ಹಿಡಿಸಿದ್ದ 'ಗೋಧಿ ದೋಸೆಯನ್ನು ಇನ್ನು ಜೀವನದಲ್ಲಿ ಮುಟ್ಟುವುದಿಲ್ಲ' ಎನ್ನುವ ಶಪಥವನ್ನು.chickenpox ಒಂದೂವರೆ ವರ್ಷದಲ್ಲಿ ಅಳಿಸಿ ಹಾಕಿತ್ತು.! ಸ್ನಾನಕ್ಕೂ ಕೊಕ್ ಬೇರೆ.


ಹೀಗೆ 'ಸಪ್ಪೆ ದಿನಗಳು' ಕಳೆದು ಹದಿನೈದು ದಿನಗಳಾದಾಗ ಶುರುವಾಯಿತು ನೋಡಿ ಅಮೋಘವಾದ ಮೂರನೇ ಅಧ್ಯಾಯ!  ಪರೀಕ್ಷೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, 7 aum arivu ಚಿತ್ರದಿಂದ ಸ್ಪೂರ್ತಿ ಪಡೆದಿದ್ದ ಪುಣ್ಯಾತ್ಮ,! ಬಂದವನೇ "ಅಕ್ಕಾ, ಚಂದ್ರನ ಮೇಲಿನ ಕಲೆಯನ್ನು ತೆಗೆಯಲಾಗದಿದ್ದರೆನಂತೆ? ನಿನ್ನ ಮುಖದ ಮೇಲಿನ ಕಲೆಯನ್ನೆಲ್ಲ ನಾನು ಕಳೆಯುತ್ತೇನೆ.." ಎಂದ ಒಮ್ಮೆ ನಾಟಕೀಯವಾಗಿ. ಆ ಡೈಲಾಗ್ ಕೇಳಿಯೇ ಒಮ್ಮೆ ಭಯವಾಗಿತ್ತು ನನಗೆ. ಅದ್ಯಾವುದೋ ಪುಸ್ತಕವನ್ನು ಓದಿ .ಅವನ ಇದ್ದು ಬಿದ್ದ ಆಯುರ್ವೇದ ಜ್ಞಾನವನ್ನೆಲ್ಲಾ ಸೇರಿಸಿ.  ಏನೇನೋ ಎಲೆ, ಬೇರುಗಳನ್ನೆಲ್ಲ ತಂದು. ಕಹಿ ಕಷಾಯ ಮಾಡಿಸಿ ಕುಡಿಸಿಯೇ ಬಿಟ್ಟ ಭೂಪ..!  ಚಂದ್ರು ಡಾಕ್ಟರರ ಸಣ್ಣ ಸೂಜಿಯ ಇಂಜೆಕ್ಷನ್ ಆದರೂ ಬೇಕಿತ್ತು. ಆದರೆ ಈ ಕಷಾಯ ಮಾತ್ರ ಯಾರಿಗೂ ಬೇಡ.! ಏನು ನೈವೇದ್ಯಕ್ಕಿಟ್ಟರೂ ಚಕಾರವೆತ್ತದೆ ಸೇವಿಸುವ ಆ ದೇವರೂ ಈ ಕಷಾಯವ ನೈವೇದ್ಯಕ್ಕೆ ಇಟ್ಟಿದ್ದರೆ ಮುಖ ತಿರುಗಿಸಿ ಕೂತುಬಿಡುತ್ತಿದ್ದನೇನೋ..! ಒಟ್ಟಿನಲ್ಲಿ ನನ್ನ ತಮ್ಮನ ಆಯುರ್ವೇದ ಪ್ರಯೋಗಕ್ಕೆ ನಾನು 'ಬಲಿಪಶು' ಆದೆ ಅನ್ನುವುದಕ್ಕಿಂತ. ಯಾವ್ಯಾವುದೋ ಸೊಪ್ಪುಗಳನ್ನು ತಿಂದು ಬಲಿಯಾಗಿ 'ಪಶು'ವಾದೆ.! 


ಏನೆಲ್ಲಾ ಅನುಭವಸಿ ಹದಿನೇಳು ದಿನ ಕಳೆವಷ್ಟರಲ್ಲಿ 'ನಾಳೆ ನಿನೆಗೆ ಸ್ನಾನ' ಎನ್ನುವ ಖುಷಿಯ ವಾರ್ತೆ ಅಮ್ಮನಿಂದ.! ಅಂತೂ ಹದಿನೆಂಟನೆಯದಿನದ ಮಿನಿ-  ಮಜ್ಜನಕ್ಕೆ ತಯಾರಾದೆ. ಅದೇನು ಖುಷಿ ಆ ಸ್ನಾನದಲ್ಲಿ. ಏನೀ ಮಹಾನಂದವೇ....! ಅಮ್ಮ ಬಂದು ತಲೆಯ ಮೇಲೆ ನೀರೆರೆದು ಹೋದ ನಂತರ ಭರ್ಜರಿ ಸ್ನಾನವಾಯಿತು.ರಸ್ತೆಯಲಿ ಮಳೆ ಸುರಿದಾಗ ಹರಿಯುವ ನೀರಿನಂತೆ ಕೊಳೆ ಹೋಗುತ್ತದೆ ಎಂದುಕೊಂಡಿದ್ದ  ನನಗೆ ಭಾರೀ ನಿರಾಸೆ. ದಿನವೂ ತಲೆ ಸ್ನಾನ ಮಾಡುತ್ತಿದ್ದ ನಾನು ಹದಿನೆಂಟು ದಿನಗಳ ನಂತರ ಮಾಡಿದರೂ ಕೊಳೆ ನಾನು ಎಣಿಸಿದ್ದ ಪ್ರಮಾಣದಲ್ಲಿ ಇರಲೇ ಇಲ್ಲ..! 
ನನ್ನ ಮಿನಿ ಮಜ್ಜನದ ನಂತರ 'ಹೊಗೆ ಹಾಕುವ' ಕಾರ್ಯಕ್ರಮ. ನನ್ನ ತಮ್ಮ ಇದ್ದಿಲನು ತಂದು ಸಾ0ಭ್ರಾಣಿಯ ಹೊಗೆಯ ತಯಾರು ಮಾಡಿಯೇ ಬಿಟ್ಟ.! ಅದರ ಜೊತೆಗೆ ಬೇವಿನ ಸೊಪ್ಪು ಬೇರೆ. ಆ ಪರಿಮಳದ ಹೊಗೆಯನ್ನು ಆಸ್ವಾದಿಸಲು ತಯಾರಾಗಿ ಕುಳಿತ ನನ್ನ ಮೂಗಿಗೆ ಬಡಿದದ್ದು ಸೀಮೆಯೆಣ್ಣೆಯ ಹೊಗೆ..!  ಕೆಂಡವ ಉರಿಸಲು ಸೀಮೆಯೆಣ್ಣೆಯ ಸುರಿದು ತಂದು ಬಿಟ್ಟಿದ್ದ ಭೂಪ.! ಆ ವಾಸನೆ ನನ್ನ ಮೂಗಿಗೆ ರಾಚಿ. ಕೆಮ್ಮು ಸೀನು ಎಲ್ಲ ಒಟ್ಟಿಗೆ ಬಂದು ನಾನು 'ಹೊಗೆ ಹಾಕಿಸಿ ಕೊಳ್ಳುವುದೊಂದು' ಬಾಕಿ..!  
ಏನೆಲ್ಲಾ ಅನುಭವವನ್ನು ಕಟ್ಟಿಕೊಟ್ಟ . ಅಳು ನಗು ಎರಡನ್ನು ಒಟ್ಟಿಗೆ ತಂದಿಟ್ಟ ಈ chickenpox ಜೀವಿತದಲ್ಲಿ ಒಮ್ಮೆ ಮಾತ್ರ ಆಗುವುದು ಎಂದು ಅಜ್ಜಿ ಹೇಳಿದಾಗ ನೆಮ್ಮದಿಯ ನಿಟ್ಟುಸಿರು ! 
ಇತಿ chickenpox ಪರ್ವಃ  ಸಮಾಪ್ತಿ:  .




26 comments:

  1. ಬರಹ ಚೆನ್ನಾಗಿದೆ.
    ಚಂದ್ರನಲ್ಲಿ ಕಲೆಗಳೂ ಸುಂದರ ಬಿಡಿ
    ಸ್ವರ್ಣಾ

    ReplyDelete
  2. ಚೆನ್ನಾಗಿದೆ ಮಹಾ ಮಜ್ಜನದ ಸಂಭ್ರಮ.. ಇನ್ನು ಕೋಳಿಗೆ ಕಲ್ಲು ಎಸಿಯೋಕ್ಕೂ ಹೋಗ್ಬೇಡಾ.. ತಿಳೀತಾ :) liked it :))

    ReplyDelete
  3. ಮಾವಿನ ಹಣ್ಣು ಮಿಸ್ ಮಾಡಿಕೊಂಡಿದ್ದಕ್ಕೆ ನೋವಿದ್ದರೂ, ನೀವು ಬೇಗ ಸುಧಾರಿಸಿಕೊಂಡರೆ ನಮಗೆ ಅಷ್ಟೇ ಸಾಕು.

    ReplyDelete
  4. soooperb.....

    Tumba chennagi padagalanna balasikolluttira...
    Odi khushiyayitu...
    Biduvu sikkaga nanna ''nannaraha''kkoo omme bheti kodi...

    www.nannapayanahagukavana.blogspot.com

    ReplyDelete
  5. ನೋವಿನ ಸುದ್ದಿ ಕೂಡ ಮನಕ್ಕೆ ಖುಷಿ ಕೊಡುವಂತೆ ಪ್ರಸ್ತುತಪಡಿಸಿದ ನಿಮ್ಮ ಬರಹ ನಿಜಕ್ಕೂ ಶ್ಲಾಘನೀಯ. ಒಂದಕ್ಕೊಂದು ಹೋಲಿಕೆ, ಶಬ್ಧಗಳ ಜೋಡಣೆ, ವಿಷಯ ಪ್ರಸ್ತುತ ಪಡಿಸುವ ಪರಿ ತುಂಬಾ ಸುಂದರವಾಗಿದೆ.ಹೋಗೆ ಹಾಕಿಸಿಕೂಳ್ಳುವ ವಿಷಯ ಕೇಳಿ ಮನತುಂಬಾ ನಕ್ಕೆ.. ಅಂತೂ ಇಂತೂ ನಿಮ್ಮ ನೋವು ಬೇರೆಯವರಿಗೆ ಖುಷಿ ಕೊಟ್ಟಿದೆ. ಹಾಗಾಗಿ ನೀವು ನೋವು ಪಟ್ಟಿದ್ದೂ ಸಾರ್ಥಕವಾಯಿತು.
    ಶುಭವಾಗಲಿ.

    ReplyDelete
  6. ಚಿಕ್ಕನ್ ಪಾಕ್ಸ್ (ಪಾಕ್ಸ್ ವಿಥ್ ಎ ‘ಪೀ’ಯಾ ‘ಯೆಪ್ಪಾ’?) ಬಂದಿತ್ತೇ ನಿಮ್ಗೇ? [ವಿಥ್ ಯೆಪ್ಪ್ (f) ಆದ್ರೆ ಇನ್ನೂ ಕೆಟ್ಟದ್ದು! ಡಬ್ಬಲ್ NV: ಕೋಳೀನೂ ನರೀನೂ!]

    ೨೨೦% ಸೊಪ್ಪು-ಸದೆ ತಿನ್ನೋಳೂಂತ ಹೇಳ್ಕೊಳ್ತೀರೀ? ಕೋಳೀ ಕಾಯಿಲೆ ಅಂತೀರಿ! ಸಿವ ಸಿವಾ! ಏನ್ ಕಾಲ ಬಂತಪ್ಪಾ? ಮಡಿ-ಮೈಲಿಗೆ ಏನೂ ಇಲ್ಲಾ ಈಗಿನ್ ಕಾಲದ್ ಹುಡುಗೀರ್ಗೆ!ಪ್ರಾಯಶ್ಚಿತ ಮಾಡ್ಕೊಂಡ್ರಾ, NV ಕಾಯಿಲೆ ಅಂಟಿಸ್ಕೊಂಡಿದ್ದಕ್ಕೇ? ಮಾಡ್ಕೊಳ್ದಿದ್ರೆ ನರಕಕ್ಕೆ ಬಂದ್ ಬಿಡ್ತೀರಿ! ನಾನೇನೋ ಅಲ್ಲಿ ನೆಮ್ಮದೀಲಿ ಇರಬೇಕೂಂತ ಪ್ಲಾನ್ ಮಾಡ್ಕೋತಾ ಇದ್ದೀನಿ...ನಿಮ್ಮಂಥ ತುಂಟರು (ನಿಮ್ಮ ಬರೆಹದಲ್ಲೇ ಕಾಣಿಸ್ತಲ್ಲಾ) ಬಂದ್ ಬಿಟ್ರೆ ಕೀಟ್ಲೆ ಕಿಲಾಡಿತನಾನ್ನ ಹೇಗಪ್ಪಾ ನಿಭಾಯಿಸ್ಕೋದೂ, ರಾಮ್ರಾಮಾ?!

    ಬುದ್ಧಿ-ಹಲ್ಲು ಮೊಳೆಯದಿರುವ ಈಗಲೇ ಇಷ್ಟೊಂದು ಕಿಲಾಡಿತನವಿದ್ರೆ, ಅವು ಬಂದ್ಮೇಲೆ ಹೇಗಪ್ಪಾ? ನಿಮ್ ಗೆಳೆಯರು ಹೇಳಿದ್ ಹಾಗೆ ಅವು ಬಾರದಿದ್ರೇನೇ ಒಳ್ಳೇದಾಂತ ಮನೋಜಿಜ್ಞಾಸೆ ನಡೆಸ್ತಾ ಇದ್ದೀನಿ!

    ಅದಿರ್ಲಿ...ಈ ಕೇಕ್ ಅಂದ್ರೇನು, ಖಗಾನೋ ಉರಗಾನೋ? ಅಲ್ಲಾ ‘ಮೊಟ್ಟೆ ಹಾಕಿದ ಕೇಕ್’ ಅಂತ ಬರೆದಿದ್ದೀರಲ್ಲಾ, ಕೇಕ್ ಮೊಟ್ಟೆ ಹಾಕುತ್ತಾಂತ?

    ಅದೇನು, ಸ್ನಾನಕ್ಕೆ ಕೊಕ್ಕು ಅಂತ? ಕೋಳಿ ಕಾಯಿಲೆ ಬಂದದ್ದೇ ಸಾಲ್ದೇ? ಅದರ ಕೊಕ್ಕೂ ಬೇರೆ ಬಂತಾ? ಹರಿಹರೀ!

    ಹದಿನೆಂಟು ದಿನಗಳ ಬಳಿಕ ಸ್ನಾನ ಮಾಡಿದ್ರೆ ಮೈಯಿಂದ ಕೊಳೆ ಉಕ್ಕಿ ಹರಿಯೋದು ಹೇಗೆ ಹೇಳಿ? ಯಾವಾಗ ಎಲ್ಲಿಗ್ ಹೋದ್ರೂ ಬಣ್ಣದ ಕೊಡೆ ಬಿಡಿಸ್ಕೊಂಡಿರುತ್ತೀರಲ್ಲಾ, ಮಳೆ, ಬಿಸಿಲು, ಧೂಳು ಬೀಳದಿರ್ಲೀಂತ!

    ಏನೇ ಇರ್ಲಿ. ಕಾಯಿಲೆ ಬಂದ್ರೂ ಅದನ್ನೊ ಹಾಸ್ಯವಾಗಿ ಬರೆದು, ನಮ್ಮನ್ನು ಕುಶಿಪಡಿಸಿದ್ದಕ್ಕೆ ಅಭಿನಂದನೆಗಳು! ನಿಸರ್ಗವನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವಷ್ಟೇ ಮನೋಹರವಾಗಿ ನಿಮ್ಮ ಬರೆಹವೂ ಇದೆ. ಇದಕ್ಕಿಂತ ಹೆಚ್ಚಿಗೆ ನಾನು ಬರೆದರೆ ಹೊಗಳಿ ಹೊನ್ನಶೂಲಕ್ಕೆ ಹಾಕಿದಂತಾದೀತು! ಆ ಪಾಪ ಎಂದಿಗೂ ಮಾಡಲಾರೆ! :)

    ReplyDelete
  7. ಸೌ..... ಚನ್ನಾಗಿದೆ..... ನಿನ್ನ ಚಿ.ಪಾಕ್ಸ್ ರಾದ್ದಾಂತ.....

    ನಿನ್ ತಮ್ಮ ಇದೇ ಟೈಮ್ ಅಂತ ನಿಂಗೆ ಮಸ್ತ್ ಕಷಾಯಾ ಕುಡಿಸ್ದಾ ಅನ್ನು....

    ಹಲಸಿನ ಚಿಪ್ಸ್ ಹಪ್ಳ ನಿಂಗೆ ಆಮೇಲಾದ್ರೀ ತಿನ್ನಲಾಗ್ತು...

    ಆದರೆ ಮಾವು?...... miss ಆಗೋಯ್ತು.....

    ReplyDelete
  8. haha perfectly humorous account of your chickenpox days..enjoyed
    :-)
    malathi S

    ReplyDelete
  9. nanage 3 varshadavaliddaga agiddu...idaada nantara namage ishta irodannella maadi dodda baale elemele badisi..vakarike baroshtu tinnisuttare..naanu 4 ne adhyayadalli adanna bareeteeya ankonde..
    ninna novannu namage naguvina vastu madi prastuta padisiddu..bahala chanda..LOVE UU KOOSE

    ReplyDelete
  10. ಸೌ, ತುಂಬ ವೇದನೆ ಆಗಿರಬೇಕು ಅಲ್ವ? :( ಹಂ ನನಗೂ ೨೭ನೇ ವರ್ಷದಲ್ಲಿ ಆಗಿತ್ತು. ಈಗ ಮಕ್ಕಳಿಗೆ ಮಾತ್ರ ಅಂತ ಇಲ್ಲ ಕಾಣುತ್ತೆ. ಬೇಗ ಹುಷಾರಾಗಿ. ಸುಂದರ ಬರಹ...

    ReplyDelete
  11. nice .... baalyadalli naanu anubhavisida chicknpox dinagalu ommele hasiyadantenisitu...

    samayavadaga nanna teerkkomme banni
    www.manaseeee.blogspot.com

    ReplyDelete
  12. ನಿಮ್ಮ ನೋವನ್ನು ನಗುವಾಗಿ ನಮಗೆ ಕೊಟ್ಟಿದ್ದೀರಲ್ಲ. ಧನ್ಯವಾದ ಅದಕ್ಕೆ.. ಬೇಗ ಹುಶಾರಾಗಿ.. ಚಿಕನ್ ಫಾಕ್ಸ್ ಪರ್ವ ಚೆನ್ನಾಗಿದೆ..

    ReplyDelete
  13. ಬಹಳ ಧನ್ಯವಾದಗಳು ಸ್ವರ್ಣ, ವಿನಾಯಕ್, ಅನಿತಕ್ಕ,ಚುಕ್ಕಿ ಚಿತ್ತಾರ :)

    ReplyDelete
  14. ಧನ್ಯವಾದಗಳು ಪ್ರದೀಪ, ಹಾಓ ಖಂಡಿತ ಭೇಟಿ ಕೊಡುತ್ತೇನೆ ನಿಮ್ಮ ಬ್ಲಾಗಿನ ಮನೆಗೆ

    ReplyDelete
  15. ಧನ್ಯವಾದಗಳು ಬದ್ರಿನಾಥ್ ಸರ್. ಮಾವಿನ ಹಣ್ಣಿನ ಸೀಸನ್ ಮುಗ್ದೋಯ್ತು :(

    ReplyDelete
  16. nimma baravaNige super..... khushiyaagatte oduttiddante.....

    thank you very much......

    ReplyDelete
  17. ಚಿಕನ್ ಪಾಕ್ಸ್ ಬಂದಾಗಿಂದು ಒಂದು ಫೋಟೋ ಹಾಕ್ರೀ ನಿಮ್ದು. ಹೆಂಗೆ ಕಾಣ್ತಿದ್ರಿ ಅಂತ ನೋಡೋಣ :)

    ReplyDelete
  18. ಹೊಟ್ಟೆಕಿಚ್ಚಾಗುವಷ್ಟು ಚೆಂದ ಬರೀತ್ಯಲ್ಲೆ ಕೂಸೆ ಏನು ಬರದ್ರೂ :) ಆಗ್ಲಿ ಹಿಂಗೆ ಬರೀತಾ ಇರು :)
    ಕೊನೆಗೆ ಮುಖದ ಮೇಲಿನ ಕಲೆ ಹೋಯ್ತಾ ಇಲ್ಲ ತಮ್ಮ ಕುಡಿಸಿದ ಕಹಿ ಕಷಾಯ ಸುಮ್ಮನೇ ಕುಡಿದದ್ದಷ್ಟೇ ಆಯ್ತಾ?

    ReplyDelete
  19. ನಿಮ್ಮ ಚಿಕನ್ ಪಾಕ್ಸ್ ಕಥೆಯನ್ನು ಓದುತ್ತ ನನಗೆ ನಾನು ಅನುಭಿಸಿದ ಚಿಕನ್ ಪಾಕ್ಸ್ ದಿನಗಳು ನೆನಪಾದವು... ತುಂಬಾ ಚೆನ್ನಾಗಿ ಬರೆದಿದ್ದೀರಾ....

    ReplyDelete
  20. ಹಾಯ್ ಸೌಮ್ಯ,

    ಚೆನ್ನಾಗಿದೆ ನಿಮ್ಮ ಚಿಕನ್ ಫೊಕ್ಷ್ ಹಗರಣ....ನನಗೂ ಚಿಕನ್ ಫೊಕ್ಷ್ ಆಗಿದ್ದಾಗ ಆದ ಅನುಭವಗಳು ಮತ್ತೆ ನೆನಪಿಗೆ ಬಂದವು....ಉತ್ತಮ ಬರಹ..

    ReplyDelete
  21. ಚಿಕ್ ಗೆ ಚಿಕನ್ ಪಾಕ್ಸ್ ಆ?! :D ಅಂಥಾ ನೋವಿನಲ್ಲೂ ನಗುವಿನ ತೋರಣ ಕಟ್ಟಿದ್ದೀರಿ.. ತುಂಬ ಚೆನ್ನಾಗಿದೆ ಸೌಮ್ಯ.. ಬೇಗ ಹುಷಾರಾಗಿ..

    ReplyDelete
  22. (ಶತ್ರು ಮಾತ್ ಕೇಳಿದ್ರು ತಮ್ಮನ ಮಾತ್ ಕೇಳಬಾರದು) ಇದು exclusively ನಂಗೆ ಅಂತ ನಾನೆ ಬರಕೊಂಡಿರೋ ಗಾದೆ ಅಮ್ಮ ತಾಯೇ ನಿನಗೆ ಜೀವನದಲ್ಲಿ ಅಮಶಂಕೆ ಮಾತ್ರ ಬರ್ದೇ ಇರ್ಲಿ ಅಂತ ಈ ತಕ್ಷಣ ತಾಯಿ ಚಾಮುಂಡೇಶ್ವರಿ ಹತ್ರ ಬೇಡ್ಕೊತೀನಿ chickenpoxನೇ ಇಷ್ಟ ರಸವತಾಗ್ ಬರ್ದಿದ್ಯ ಅಂದರೆ ಇನ್......

    ReplyDelete
  23. ಮಸ್ತ್ ಬರ್ದ್ಯಲೆ ಅಕ್ಕ

    ReplyDelete