Saturday, August 7, 2010

ವಿಶ್ವ ಕವಿ ಟಾಗೋರರಿಗೊಂದು ನುಡಿನಮನ ..
ನಿನ್ನೆ ಅಮ್ಮ ಅದೇನೋ ಬರೆಯುತ್ತಿದ್ದರು, ಸುಮ್ಮನೆ ಇಣುಕಿದೆ ಒಮ್ಮೆ. ಅವರು ಬರೆಯುತ್ತಿದ್ದದ್ದು ರವೀಂದ್ರನಾಥ ಟಾಗೋರರ ಕುರಿತು. ಅಮ್ಮ ಭಾಷಣದ ತಯಾರಿಯಲ್ಲಿದ್ದರು. ಬರೆದದ್ದು ಓದಬೇಕು ಅನ್ನಿಸಿತು ಓದಿದೆ. ಬಹಳ ಸುಂದರವಾಗಿ ಬರೆದಿದ್ದರು. ರವೀಂದ್ರರ ಬಗ್ಗೆ ಎಷ್ಟೋ ವಿಷಯ ತಿಳಿಯಿತು. ಅಮ್ಮ ಬರೆದದ್ದು ಯಥಾವತ್ತಾಗಿ ಇಲ್ಲಿ ಇಡಬೇಕು ಅಂದುಕೊಂಡೆ, ಒಂದು ಗಂಟೆಯ ಭಾಷಣದ ವಿಷಯ ಅಲ್ಲಿದ್ದದ್ದು. ಉದ್ದವಾದೀತು ಎಂದು ಎನಿಸಿ ನನ್ನ ಮಾತುಗಳಲ್ಲಿ ಬರೆಯುತ್ತಿದ್ದೇನೆ. ಅವರ ಬಗ್ಗೆ ಬರೆಯುವಷ್ಟು ದೊಡ್ಡವಳು ನಾನಲ್ಲ. ನನ್ನ ಗೌರವವನ್ನು ಬರಹದ ಮೂಲಕ ಸಲ್ಲಿಸುತ್ತಿದ್ದೇನೆ ಅಷ್ಟೆ. ಇಂದು ಅಂದರೆ ಆಗಷ್ಟ್ 7 ಟಾಗೋರರ ಪುಣ್ಯ ತಿಥಿ.
ತಮ್ಮ ಎಂಟನೇ ವಯಸ್ಸಿನಲ್ಲಿಯೇ ಕವನವನ್ನು ಬರೆದ ರವೀಂದ್ರರು ಜನಿಸಿದ್ದು 1861 ಮೇ 7ರಂದು ಬಂಗಾಳದ ಪ್ರಸಿದ್ದ ಥಾಕೂರ್ ಕುಟುಂಬದಲ್ಲಿ. ಮಹರ್ಷಿ (ಹಿಮಾಲಯಕ್ಕೆ ಹೋಗಿ ತಪಸ್ಸು ಮುಗಿಸಿ ಬಂದಿದ್ದರಂತೆ) ದೇವೇಂದ್ರನಾಥ ಥಾಕೂರ್ ಹಾಗೂ ಶಾರದಾದೇವಿಯವರ 14 ನೇ ಮಗು ರವೀಂದ್ರ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದವರು ಸೇವಕರು. 'ಶ್ಯಾಮು' ಎನ್ನುವ ಸೇವಕ ಪುಟ್ಟ 'ರಬಿ' ಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕುತ್ತಿದ್ದ. ಕೋಣೆಯಲ್ಲಿನ ಕಿಟಕಿಯ ಬಳಿ ಕುಳಿತು ಪ್ರಕೃತಿಯನ್ನು ನೋಡುತ್ತಿದ್ದ 'ರಬಿ ',ಹೊರಗೆ ಬಿಡುತ್ತಲೇ ಓಡುತ್ತಿದ್ದುದು ಹೂದೋಟಕ್ಕೆ. ಮಂಜು,ಹುಲ್ಲು, ಸೂರ್ಯರಶ್ಮಿ, ಕೆರೆ, ಗಿಡಗಳನ್ನು ನೋಡುತ್ತಾ ತನ್ನದೇ imaginary ಜಗತ್ತಿನಲ್ಲಿ ಓಡಾಡುತ್ತಿದ್ದ. ಶಾಲೆಯ ಪಾಠದಲ್ಲಿ ಆಸಕ್ತಿಯಿರದ 'ರಬಿ'ಗೆ ಶಾಲೆಯ ಕೃತಕ, ನೀರಸ ವಾತಾವರಣಕ್ಕಿಂತ ಮನೆಯ ಕಿಟಕಿಯ ಹಿಂದಿನ ಪ್ರಕೃತಿ ಸೆಳೆಯುತ್ತಿತ್ತು.


ಮುಂದೆ 1913 ರಲ್ಲಿ ಅಣ್ಣನೊಡನೆ ಇಂಗ್ಲೆಂಡಿಗೆ ಹೋಗಿ ಇಂಗ್ಲಿಷ್ ಸಾಹಿತ್ಯವನ್ನು ಓದುತ್ತಾರೆ. ಅನಾರೋಗ್ಯದಿಂದ ಮನೆಗೆ ಹಿಂದಿರುಗಿ, ಪುನಃ ಇಂಗ್ಲೆಂಡಿಗೆ ಸಮುದ್ರ ಯಾನವನ್ನು ಮಾಡುವಾಗ ರಚಿಸಿದ ಕವನಗಳ ಸಂಗ್ರಹವೇ 'ಗೀತಾಂಜಲಿ. nobel ಸಿಕ್ಕಿದ್ದೂ ಇದಕ್ಕೇ. ಗೀತಾಂಜಲಿಯನ್ನು ಅವರೇ ಇಂಗ್ಲಿಷಿಗೆ ಅನುವಾದಿಸುತ್ತಾರೆ. ಭಾರತದ ಅಖಂಡ ಐಸಿರಿಯನ್ನು ಕಣ್ಣೆದುರಿಗೆ ನಿಲ್ಲಿಸುವ, ನಮ್ಮ ರಾಷ್ಟ್ರಗೀತೆ "ಜನಗಣಮನ"ವನ್ನು ಬರೆಯುತ್ತಾರೆ..!ಗೀತಾಂಜಲಿಯಲ್ಲಿ ದೇವರ ಅಸ್ತಿತ್ವ, ಹುಟ್ಟು- ಸಾವು,ಮಕ್ಕಳ ಆಟ,ಪ್ರೇಮ,ಮಾನವನ ಆಸೆ ಆಕಾಂಕ್ಷೆಗಳ ಬಗ್ಗೆ ಕಾವ್ಯಮಯವಾಗಿ ಆದರೆ ಅಷ್ಟೇ ಸರಳ ಶೈಲಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಸಾಹಿತ್ಯದ ಸುಮಾರು ಎಲ್ಲ ಪ್ರಕಾರಗಳಲ್ಲಿ ರವೀಂದ್ರರು ಬರೆದಿದ್ದಾರೆ .ನಾಟಕಕಾರರಾದ ರವೀಂದ್ರರು ವಾಲ್ಮೀಕಿ ಪ್ರತಿಭಾ,ರಕ್ತ ಕರಭಿ,ವಿಸರ್ಜನ,ಮುಕ್ತಧಾರಾ,ಚಿತ್ರಾಂಗದಾ,ಚಂಡಾಲಿಕಾ,ಆಲಿಕ್ ಬಾಬು,ಆಚಲಯತ್ನ ಹೀಗೆ ಹಲವು ನಾಟಕಗಳನು ಬರೆಯುತ್ತಾರೆ, ಅದರಲ್ಲಿ ಅಭಿನಯಿಸುತ್ತಾರೆ ಕೂಡ.ಅವರು ಕಾರವಾರಕ್ಕೆ ಬಂದಾಗ ರಚಿತವಾದದ್ದು' ಪ್ರಕೃತಿರ್ ಪ್ರತಿಶೋದ್' ಎಂಬ ನಾಟಕ.ಚೋಕೆರ್ ಬಾಲಿ, ಭಗ್ನನೌಕಾ,ಗೋರಾ,ಯೋಗಾಯೋಗ,ರಾಜ ಔರ್ ರಾಣಿ ಹೀಗೆ ಹೃದಯಸ್ಪರ್ಶಿಯಾದ 12ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಪಾತ್ರಗಳು ಜೀವಂತ, ವರ್ಣನೆ ನೈಜತೆಗೆ ಸನಿಹ.ಯುರೋಪ್,ಜಪಾನ ಜಾತ್ರಿ,ಪ್ರಭಾಸಿರ್ ಪತ್ರ,ರಸಿಯಾರ್ ಚಿಟಿ, ಇವು ಪ್ರವಾಸ ಕಥನಗಳು.


ಚರಿತ್ರಪೂಜಾ,ಸಮಾಜ, ಸ್ವದೇಶ,ಶಾಂತಿನಿಕೇತನ,ವಿಚಿತ್ರ ಪ್ರಬಂಧ,ವಿಶ್ವಪರಿಚಯ, ಸಭ್ಯತಾರ್ ಸಂಕಟ,ಶಿಕ್ಷಾ,ಶಬ್ದತತ್ವ ,ರಾಮಮೋಹನರಾಯ ಇವು ಟಾಗೋರರ ಪ್ರಸಿದ್ಧ ಪ್ರಬಂಧಗಳು.


"ಬಿದಿಗೆ ಚಂದ್ರ" ಇದು ಶಿಶು ಸಾಹಿತ್ಯಕ್ಕೆ ಟಾಗೋರರ ಕೊಡುಗೆ.ಚಿಕ್ಕ ಮಕ್ಕಳ ಮನಸ್ಸು, ಮುಗ್ಧತೆ,ಕುತೂಹಲ,ಕಲ್ಪನಾ ಸಾಮ್ರಾಜ್ಯ ಇವೆಲ್ಲವೂ ಸುಂದರವಾಗಿ ಚಿತ್ರಿಸಲ್ಪಟ್ಟಿದೆ."ಗಲ್ಪಗುಚ್ಹ" ಇದು ಟಾಗೋರರ ಸಣ್ಣಕಥೆಗಳ ಸಂಕಲನ. ಗ್ರಾಮಜೀವನದ ಹಲವು ಮುಖಗಳನ್ನು ಇದರಲ್ಲಿ ಕಲಾಪೂರ್ಣವಾಗಿ ತಂದಿದ್ದಾರೆ.


ತಾರಾಮಂಡಲದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಲು "ವಿಶ್ವಪರಿಚಯ"ಎಂಬ ವೈಜ್ಞಾನಿಕ ಪುಸ್ತಕವನ್ನು ಬರೆಯುತ್ತಾರೆ.

ದಾಲಿಯ, ಪೋಸ್ಟ್ ಮಾಸ್ಟರ್,ಹೆಂಡತಿಯ ಪತ್ರ,ಕಾಬೂಲಿವಾಲ ಹೀಗೆ 94ಕ್ಕೂಹೆಚ್ಚು ಕತೆಗಳನು ಬರೆದಿದ್ದಾರೆ. ಕಾಬೂಲಿವಾಲ ಒಬ್ಬ ತಂದೆಯ ಮನಸ್ಸು ಹೇಗಿರುತ್ತದೆ ಎನ್ನುವುದನ್ನು ಸಾರುವ ಮನಮಿಡಿಯುವ ಕಥೆ. 'ಮರಳಿ ಮನೆಗೆ' ಒಂಟಿತನದ ದುಗುಡವನ್ನು ಅನುಭವಿಸುವ ಹಾಗೂ ತಾಯಿಯ ಪ್ರೀತಿಗಾಗಿ ಹಂಬಲಿಸುವ ಹುಡುಗನೊಬ್ಬನ ಮನೋಜ್ಞವಾದ ಕಥೆ.'ಹೆಂಡತಿಯ ಪತ್ರ' ಈ ಕಥೆಯಲ್ಲಿ ,ಬಡತನ,ಅನ್ಯಾಯ,ಹೆಣ್ಣಿನ ಶೋಷಣೆ,ಆಕೆ ಅನುಭವಿಸುವ ಮಾನಸಿಕೆ ವೇದನೆಯನ್ನು ಮನಮುಟ್ಟುವಂತೆ ಬರೆದಿದ್ದಾರೆ.'ದಾಲಿಯ' ಕಥೆಯಲ್ಲಿ ಪ್ರಕೃತಿಗೆ ಹತ್ತಿರವಾಗಿರುವ ಮನುಷ್ಯ ಹೇಗೆ ಸಹಜವಾಗಿ ಒಳ್ಳೆಯವನಾಗಿ ಇರಬಲ್ಲ ಎಂಬುದನ್ನೂ,ದ್ವೇಷ ಹಗೆತನ ಇವೆಲ್ಲ ಪ್ರೀತಿಯ ಮುಂದೆ ಎಷ್ಟು ಕ್ಷುಲ್ಲಕವಾಗಿ ಕಾಣಬಲ್ಲವು ಎಂಬುದನ್ನೂ ಅಮೋಘವಾಗಿ ಚಿತ್ರಿಸಿದ್ದಾರೆ.


ರವೀಂದ್ರರ ಪ್ರತಿಭೆ ಸಾಹಿತ್ಯ ರಂಗಕ್ಕಷ್ಟೇ ಮೀಸಲಾಗಿರಲಿಲ್ಲ . ಅವರು ಚಿತ್ರಕಾರರೂ ಹೌದು. ಚಿತ್ರಲಿಪಿಯ ಎರಡು ಸಂಪುಟದಲ್ಲಿ ಅವರ ಚಿತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ತಾವು ರಚಿಸಿದ್ದ ಕವನಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದ ರವೀಂದ್ರರು ಗಾಯಕರೂ, ಗಮಕಿಗಳು,ಉತ್ತಮ ನಟರೂ, ನಿರ್ದೇಶಕರೂ ಆಗಿ ಪ್ರಸಿದ್ಧರಾಗಿದ್ದರು.


ರವೀಂದ್ರರು ಶಾಂತಿನಿಕೇತನ,ಶ್ರೀನಿಕೇತನ,ವಿಶ್ವಭಾರತಿ ಎನ್ನುವ ಮೂರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಶಾಂತಿನಿಕೇತನದಲ್ಲಿನ 'ವಸಂತೋತ್ಸವ' ಇಂದಿಗೂ ಜನಪ್ರಿಯ.


ಕವಿ,ಕಾದಂಬರಿಕಾರ,ಪ್ರಬಂಧಕಾರಕ,ನಟ,ಚಿತ್ರಕಾರ,ನಿರ್ದೇಶಕ,ವಿಜ್ಞಾನಿ,ಮನೋವಿಶ್ಲೇಷಕ,ಗಾಯಕ,ಸ್ವರಸಂಯೋಜಕ,ಪ್ರಕೃತಿ ಪ್ರೇಮಿ ಹೀಗೆ ಹತ್ತು ಹಲವು ಮುಖಗಳ ಪ್ರತಿಭೆಯ ಟಾಗೋರರನ್ನು 'ಗುರುದೇವ' ಎಂದು ಕರೆಯದೇ ಇರಲಾದೀತೇ?


ವಿಶ್ವಕವಿಯಾಗಿ ಬಂಗಾಳಿ ಸಾಹಿತ್ಯವನ್ನೂ,ಭಾರತದ ಕೀರ್ತಿಯನ್ನೂ ಬೆಳಗಿದ ರವೀಂದ್ರರ ಪುಣ್ಯ ತಿಥಿ ಇಂದು.ಅವರಿಗೊಂದು ಪುಟ್ಟ ನುಡಿನಮನ.


ಲೇಖನವನ್ನೇನೋ ಬರೆದೆ. ಮತ್ತೊಮ್ಮೆ ಓದಿದರೆ ಅಮ್ಮನ influence ಬಹಳವಾಗಿ ಕಾಣುತ್ತಿತ್ತು ..!


5 comments:

 1. ಒಳ್ಳೆಯ ವಿಷಯ ಸಂಗ್ರಹ.. ರವೀಂದ್ರನಾಥರ ಅಗಾಧ ವ್ಯಕ್ತಿತ್ವಕ್ಕೆ ನನ್ನದೂ ನಮನ!

  ReplyDelete
 2. ಚಿಕ್ಕ ಬರಹವದರೋ ಚೊಕ್ಕವಾಗಿ ಇದೆ ... ಟಾಗೋರ್ ರ ವ್ಯಕ್ತಿತ್ವಕ್ಕೆ ನನ್ನದೊಂದು ಸಲಾಂ

  ನನ್ನ ಸ್ನೇಹಲೋಕ ....(ORKUT)
  satishgowdagowda@gmail.com
  ನನ್ನ ಬ್ಲಾಗ್ ...
  www.nannavalaloka.blogspot.com

  ReplyDelete