Thursday, October 21, 2010

ಎರಡು ಧ್ರುವ.




ಬಹಳ ದಿನಗಳಿಂದ ಒಂದು ಸರಳ ಕಥೆ ಮನಸಿನಲ್ಲಿತ್ತು.  ಓದಿ ಹೇಗಿದೆ ಹೇಳಿ :





ಅವರಿಬ್ಬರೂ ಇದ್ದದ್ದೇ ಹಾಗೆ. ಅವನು ಉತ್ತರ ಧ್ರುವವಾದರೆ. ಅವಳು ದಕ್ಷಿಣ. ಅವಳು ಬಾಯಿಬಡುಕಿ ಇಡೀದಿನ ವಟವಟ ಅನ್ನುತ್ತಲೇ ಇರುವವಳಾದರೆ, ಅವನು ಮೌನಿ. ಅವನು ಅಂತರ್ಮುಖಿ, ಅವಳು ಬಹಿರ್ಮುಖಿ. ಅವಳು ಚಂಚಲೆ, ಹುಡುಗಾಟದ ಹುಡುಗಿ ಅವನು ಪ್ರಬುದ್ಧ, ಗಂಭೀರ ಹುಡುಗ...! ತದ್ವಿರುದ್ಧ ಸ್ವಭಾವ.


ಅವರಿಬ್ಬರ ಭೇಟಿ ಆದದ್ದೇ ಅಚಾನಕ್ ಆಗಿ. ಹುಡುಗಿಯರೆಂದರೆ ಮಾರು ದೂರ ಓಡುತ್ತಿದ್ದ ಹುಡುಗ,ಸಮುದ್ರದದ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುತ್ತಿದ್ದ ಹುಡುಗಿಯನ್ನು ಸುಮ್ಮನೆ ಮಾತನಾಡಿಸಿದ್ದ.. ಹಾಗೆ ದಡದತ್ತ ನಡೆದು ಬಂದ ಹುಡುಗಿ ಪಟಪಟನೆ ಮಾತನಾಡಿದ್ದಳು. ಹಳೆಯ ಸ್ನೇಹಿತರ ಆತ್ಮೀಯತೆಯಲ್ಲಿ.ವಾಚಾಳಿ ಹುಡುಗಿಯ ಮಾತಿನ ಮೋಡಿಗೆ,ತೋರಿದ ಆತ್ಮೀಯತೆಗೆ ಬೆರಗಾಗಿದ್ದ ಹುಡುಗ. .! ಅವಳು ಮಾತನಾಡಿದ ಪರಿಗೆ ನಕ್ಕಿದ್ದ, ಮೊದಲ ಬಾರಿಗೆ ಮನದುಂಬಿ ಕಣ್ಣಲ್ಲಿ ನೀರಿಳಿಯುವಷ್ಟು..! ಅದೇನೋ ಆಕರ್ಷಣೆಯಿತ್ತು ಆ ಹುಡುಗಿಯ ಮುಗ್ಧ ಮಾತುಗಳಲ್ಲಿ, ಅವಳ ಆ ಅಮಾಯಕ ಕಣ್ಣುಗಳಲ್ಲಿ.


ಅಂದು ಸಮುದ್ರತೀರ ಬಿಡುವಾಗ ಉಳಿದದ್ದು, ಅವಳ ಒದ್ದೆ ಪಾದಗಳಿಗಂಟಿದ ಮರಳಿನ ಕಣಗಳು, ಜೊತೆಗೆ ಹುಡುಗನ ಮನದಲ್ಲಿ ಆ ಹುಡುಗಿಯ ಜೊತೆ ಕಳೆದ ನೆನಪು.!ಇಬ್ಬರ ಹವ್ಯಾಸಗಳು ಒಂದೇ. ಇಬ್ಬರಿಗೂ ನಿಸರ್ಗ, ಮಳೆ,ಬೆಳದಿಂಗಳು,ಸಂಗೀತ, ಸಾಹಿತ್ಯ ಅಂದರೆ ಇಷ್ಟ. ಹವ್ಯಾಸಗಳು ಇಬ್ಬರನ್ನೂ ಹತ್ತಿರ ತಂದಿದ್ದವು.


ಅವನಿಗೆ ಕೇಳುಗರು ಇಹ ಮರೆಯುವಂತೆ ಕೊಳಲು ನುಡಿಸುವುದು ಗೊತ್ತು. ಅವಳಿಗೆ ಹೃದಯ ಕರಗುವಂತೆ ಹಾಡುವುದು ಗೊತ್ತು. ಇಡೀ ದಿನ ಮಾತಾಡುತ್ತಲೇ ಇರುವ ಹುಡುಗಿ ಹಾಡಿದಳೆಂದರೆ,ಮೋಡವೂ ಕರಗಿ ಮಳೆ ಸುರಿಯಬೇಕು.


ದಿನಗಳೆದಂತೆ ಸ್ನೇಹ ಗಾಢವಾಗುತ್ತಲೇ ಹೋಯಿತು. ವಾರದ ಕೊನೆಯ ಸಂಜೆ ಹೊತ್ತಲ್ಲಿ ಹಾಡು, ಇವಳ ಮಾತು, ಅವನ ಕೊಳಲ ಗಾನ ಇವಿಷ್ಟೇ ಅವರ ಪ್ರಪಂಚ. ಹುಡುಗಿ ಮಾತನಾಡುತ್ತಲೇ ಹೋದರೆ ಹುಡುಗ ಮನದುಂಬಿ ನಗುತ್ತಿದ್ದ. ಅದೇ ಸಮುದ್ರದ ಅಲೆಗಳು,ಹಸಿ ಮರಳು. ಅವಳ ಹೆಜ್ಜೆಗುರುತುಗಳು, ನಗು, ನೋಟ ಎಲ್ಲ ಇಷ್ಟ ಅವನಿಗೆ. ಇವನ ಹೆಜ್ಜೆಯ ಮೇಲೆ ಅವಳು ಕಷ್ಟಪಟ್ಟು ಹೆಜ್ಜೆ ಇಡುತ್ತ ಸಾಗುವ ರೀತಿಗೆ ಶರಣಾಗಿದ್ದ. ಕಂಡೂ ಕಾಣದಂತೆ ಮುಗುಳ್ನಕ್ಕಿದ್ದ .ಮೌನಿ ಹುಡುಗ ಅವಳ ಧ್ಯಾನಿಯಾಗುತ್ತ ಹೋದ. ಅವಳಿಗೂ ಅವನೆಂದರೆ ಇಷ್ಟವೆಂದು ಅವಳ ಕಂಗಳೇ ಹೇಳುತ್ತಿದ್ದವು. ಆದರೆ ಯಾರೊಬ್ಬರೂ ಬಾಯಿ ಬಿಡಲಿಲ್ಲ...!


ಅಂದು ಪೌರ್ಣಿಮೆ. ಬಾನಿನಲ್ಲಿ ಚಂದ್ರ -ಬೆಳದಿಂಗಳು. ಅವನ ಜೊತೆ ಅವಳ ಮೊದಲ ಹುಟ್ಟಿದ ಹಬ್ಬ. ಹುಟ್ಟಿದ ಹಬ್ಬವ ಅದೇ ಸಮುದ್ರ ತಟದಲ್ಲಿ ಆಚರಿಸಿ ಸಂಭ್ರಮಿಸಿದ್ದ. ನಿಶೆಯ ನೀರವವ ಸಮುದ್ರದ ಅಲೆಗಳ ಶಬ್ದಕ್ಕೆ ಕರಗಿತ್ತು. ಮುದ್ದು ಹುಡುಗಿಗೆ ಒಂದು ಚಂದದ Teddyಯ ಜೊತೆ ಸಮುದ್ರದ ಚಿಪ್ಪುಗಳ ಹಾರವನ್ನು ನೀಡಿದ್ದ. ಹುಡುಗಿಯ ಕಣ್ಣಲ್ಲಿದ್ದ ನೀರಿನಲ್ಲಿ ಚಂದಿರ ತನ್ನ ಮುಖ ನೋಡಿ ಮೆಲ್ಲನೆ ಮೋಡದ ಮರೆಗೆ ಸರಿದಿದ್ದ. ಹುಡುಗ ಮುಗುಳ್ನಕ್ಕು "Be happy Dear" ಎಂದು ಹೇಳಿ ನಡೆದು ಬಿಟ್ಟಿದ್ದ.


ಅಲ್ಲಿಂದ ಏನಾಯಿತೋ ಗೊತ್ತಿಲ್ಲ. ಹುಡುಗ ಅವಳನ್ನು ಸುಮ್ಮನೆ avoid ಮಾಡತೊಡಗಿದ. ಅವಳ ಯಾವ ಪ್ರಶ್ನೆಗೂ ಉತ್ತರವೇ ಇರಲಿಲ್ಲ ಅವನ ಬಳಿ. ಕಾಡಿಸಿ ಪೀಡಿಸಿ ಕೇಳಿದಾಗ ಹುಡುಗ ಹೇಳಿದ್ದಿಷ್ಟೇ " ನಾವಿಬ್ಬರೂ ಭೂಮಿಯ ಎರಡು ಧ್ರುವಗಳು ಒಂದಾಗಲು ಸಾಧ್ಯವೇ ಇಲ್ಲ ಹುಡುಗೀ". ಹುಡುಗಿ ಕಂಗಾಲಾದಳು.ಕಣ್ಣೀರಾದಳು ಕೊನೆಗೆ ಸುಮ್ಮನಾದಳು. ವಾರದ ಕೊನೆಗೆ ಭೇಟಿಯಾಗದೆ ತಿಂಗಳುಗಳು ಕಳೆದವು.ಕಡಲ ತಡಿಯಲ್ಲಿ ಕೊಳಲ ಗಾನವಿಲ್ಲ, ಸಮುದ್ರವೇ ಕಂಗಾಲಾಗುವಂತೆ ಮಾತಾಡುವ ಹುಡುಗಿಯೂ ಇಲ್ಲ. ಅವಳ ಭಾವಗೀತೆಯೂ ಇಲ್ಲ.


ಹುಡುಗಿ ನಿರ್ಧರಿಸಿದ್ದಳು. ಅವನ ಕೊನೆಯ ಬಾರಿ ಭೇಟಿ ಮಾಡುವುದೆಂದು. ಮುಂದೆಂದೂ ಸಿಗಲೂ ಬಾರದು ಅವನಿಗೆ. ಅವನು ಕೊಟ್ಟ ಕಾಣಿಕೆಗಳನ್ನೆಲ್ಲ ಅವನಿಗೇ ಒಪ್ಪಿಸಿ ಬಿಡಬೇಕು. ಕರೆದಳು ಅವನ ಕಡಲ ತಡಿಗೆ "ಕೊಳಲಿನೊಂದಿಗೆ ಬಾ " ಎಂದು. ಮತ್ತದೇ ಬೆಳದಿಂಗಳ ರಾತ್ರಿ, ಹಸಿಮರಳು, ಹುಡುಗಿಯ ಕೈಯಲ್ಲಿ ಅದೇ teddy,ಅದರ ಕುತ್ತಿಗೆಯಲ್ಲಿ ಚಿಪ್ಪಿನ ಸರ.!


ಹುಡುಗನೂ ಬಂದ. ಅದೇ ಮುಗುಳುನಗೆ. ಹುಡುಗಿಯ ಪಕ್ಕದಲ್ಲಿ ಕುಳಿತ. ಹುಡುಗಿ ಮೌನಿಯಾಗಿದ್ದಳು. ಮೌನವೇ ಮೇಳೈಸಿತ್ತು ಅವರಿಬ್ಬರ ನಡುವೆ ..! "ಕೊನೆಯ ಬಾರಿ ಒಮ್ಮೆ ಕೊಳಲ ನುಡಿಸ್ತೀಯಾ?, ಇನ್ಯಾವತ್ತು ಕೇಳುವುದಿಲ್ಲ ಕಣೋ " ಅಂದಳು ಹುಡುಗಿ ಮೌನವ ಮುರಿದು. ಹುಡುಗ ಮುಗುಳ್ನಕ್ಕ ಮತ್ತೊಮ್ಮೆ, ಕೊಳಲಿಗೆ ಉಸಿರು ಕೊಟ್ಟ. ಉಸಿರು ದನಿಯಾಗಿ, ನಾದವಾಗಿ ಹೊಮ್ಮಿತು. ಸಮುದ್ರದ ಭೋರ್ಗರೆತವ ಮೀರಿ..!

ಹುಡುಗ ಕೊಳಲು ಊದುವುದನ್ನು ನಿಲ್ಲಿಸಿದ. "ಒಂದು ಹಾಡು ಹೇಳೇ ಎಂದ ". ಹುಡುಗಿ ಮೌನವಬಿಟ್ಟಳು, ಹಾಡಾದಳು. "ನೀನಿಲ್ಲದೆ ನನಗೇನಿದೆ .... ... " ಭಾವನೆಗಳ ಬಿಚ್ಚಿಟ್ಟು ಹಾಡಿದಳು. ಅವಳು ತನ್ಮಯನಾಗಿ ಹಾಡುತ್ತಿದ್ದರೆ, ಹುಡುಗ ಕಣ್ಣೀರಾಗಿದ್ದ. ಬಂದು ಬಿಗಿದಪ್ಪಿದಾಗಲೇ ಹುಡುಗಿಯು ವಾಸ್ತವಕ್ಕೆ ಬಂದದ್ದು. ಇಬ್ಬರ ಕಣ್ಣಲ್ಲೂ ನೀರು... "ಎಲ್ಲೂ ಹೋಗಬೇಡವೇ, ನೀನಿಲ್ಲದೆ ನಾನಿಲ್ಲ ಹುಡುಗೀ .." ಹುಡುಗನೆಂದ. ಹುಡುಗಿ ಮೂಗೊರೆಸುತ್ತ, ಕಣ್ಣಲ್ಲಿ ಮಿಂಚು ತುಳುಕಿಸುತ್ತ ಎಂದಳು, "ನಾವಿಬ್ಬರೂ ಭೂಮಿಯ ಎರಡು ಧ್ರುವಗಳಲ್ಲ ಹುಡುಗ, ಆಯಸ್ಕಾಂತದ ಎರಡು ವಿರುದ್ಧ ಧ್ರುವಗಳು..! "ಹುಡುಗ ನಕ್ಕುಬಿಟ್ಟ ಅದೇ ಅವನ ಹಳೆ ಸ್ಟೈಲಿನಲ್ಲಿ. .! ಬಾನಲ್ಲಿ ಚಂದ್ರ ನಗುತ್ತಿದ್ದ. ಮರಳಲ್ಲಿ ತಣ್ಣಗೆ ಕುಳಿತ ಕೊಳಲಿನ ಕಡೆ ನೋಡಿ, ಚುಕ್ಕಿಯೊಂದು ಕಣ್ಣು ಮಿಟುಕಿಸಿತು ... !

Sunday, October 10, 2010

ಮುರಿದ ಸಾಲುಗಳು ...


ಕಾಲೇಜಿನಲ್ಲಿ ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳಿವು. ಬ್ಲಾಗಿನಲ್ಲಿ ಹಾಕಲೋ ಬೇಡವೋ ಅಂತಿದ್ದೆ. ಮೊನ್ನೆ ನನ್ನ ಹಳೆ note books ಎಲ್ಲ ಜೋಡಿಸಿಡುತ್ತಿರುವಾಗ ಕೊನೆಯ ಪೇಜಿನಲ್ಲಿ ಕಂಡವು. ಅದೇನೋ ಅಕ್ಕರೆ ಈ ಕೊನೆಯ ಹಾಳೆಯ ಮೇಲೆ. ಶಾಲಾ ದಿನದಿಂದಲೂ ಕೊನೆಯ ಪೇಜಿನಲ್ಲಿ ಬರೆಯುವ ಚಟ ಇತ್ತು. ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ತುಂಬಾ ಜನರಿಗೆ ಈ ಹವ್ಯಾಸ ಅಥವಾ ಚಟ ಇದೆ ಅಂದು ಕೊಂಡಿದ್ದೇನೆ. ಶಾಲಾ ದಿನಗಳ stupid crushಗಳ ಹೆಸರನ್ನು ಬರೆಯಲು ಬಳಕೆಯಾಗುತ್ತಿದ್ದ ಆ ಕೊನೆಯ ಹಾಳೆ. ನಂತರ ಮನದ ಭಾವಗಳನ್ನು ಸಾಲಾಗಿ ನಿಲ್ಲಿಸಿ ಅದೇನೋ ಒಂದು ವಿಚಿತ್ರ ರೂಪ ಕೊಟ್ಟು ಬಿಡುವಷ್ಟು ಬೆಳೆದು ನಿಂತಿತ್ತು.






ನಿಮಗೂ ನಿಮ್ಮ note bookನ ಕೊನೆಯ ಪೇಜು ನೆನಪಿಗೆ ಬರಬಹುದು. ಅದರಲ್ಲೂ ಒಂದಿಷ್ಟು ಸಾಲುಗಳಿರಬಹುದು ಅಲ್ವಾ ? ಒಂದೊಂದು ಸಾಲು ವಿಚಿತ್ರ ಎನಿಸಬಹುದು. ಅದಾವ ಭಾವವಿದೆ ಎಂದು ಅರಿಯುವ ಮೊದಲೇ ನಿಮ್ಮ ಹಳೆಯ ಪ್ರೀತಿ ನೆನಪಾಗಬಹುದು. ಕಳೆದು ಹೋದ ಒಂದಿಷ್ಟು ದಿನಗಳು ನೆನಪಾಗಬಹುದು...!
ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಪ್ರತಿಕ್ರಿಯಿಸಿ.


** ಮುರಿದು ಬಿದ್ದ ಹಕ್ಕಿಯ ಗೂಡೊಂದರ ಮೇಲೆ ಮಂಜಿನ ಹನಿಯೊಂದು ಕೂತು ಕನಸು ಕಾಣುತ್ತಿತ್ತು.


**ಅಮಾವಾಸ್ಯೆಯ ಇರುಳಲ್ಲೂ ಶಶಿಗಾಗಿ ಕಾದು ಕುಳಿತಿರುವ ಚುಕ್ಕಿ, ಚುಕ್ಕಿಯ ನೆನಪಲ್ಲೇ ಬೆಳಗುವ ಮಿಂಚು ಹುಳು ..!


**ನಾನು ಕಾಡಿಸಿದೆ, ಪ್ರೀತಿಸಿದೆ, ಕೊನೆಗೆ ನಿನಗಾಗಿ ಕಾದೆ ... ನೀನು ನನ್ನ ಬದುಕಿಂದ ಎದ್ದೆ ...!


**ಮೊನ್ನೆ ಮೊನ್ನೆ, ಕನ್ಯತ್ವ ಕಳೆದುಕೊಂಡೆ, ಎಂದು ಬಿಕ್ಕಿದ ಕನ್ಯಾ ರಾಶಿಯ ಹುಡುಗಿ ...!


** ಹುಡುಗಿಯ ಕೆನ್ನೆ ಮೇಲಿನ ಕಣ್ಣ ಹನಿಯಲಿ ನಕ್ಷತ್ರವೊಂದು ತನ್ನ ಬಿಂಬವ ನೋಡಿ ನಕ್ಕಿತು ..!


** ಒಂದಿಷ್ಟು ನೆನಪುಗಳ ಹೂತು ಗೋರಿ ಮಾಡಿದೆ. ರಾತ್ರೆ ಬಿದ್ದ ಕನಸೊಂದು ಗೋರಿಯೊಳಗಿದ್ದ ನೆನಪುಗಳ ಎಬ್ಬಿಸಿ ಬಿಟ್ಟಿತ್ತು ..!


**ಉಸಿರೊಂದಕ್ಕೆ ತಾನು ದನಿಯಾಗಬಹುದು ಎಂಬುದನ್ನು ಮರೆತು, ದನಗಾಹಿ ಹುಡುಗನೊಬ್ಬನ ಕೊಳಲ ಗಾನವ ಕೇಳುತ್ತ ಮೈಮರೆತ ಬಿದಿರ ಕೋಲು ..!




**ವರ್ತಮಾನದಲಿ ಕುಳಿತ ಮನಸಿಗೆ ಭೂತ-ಭವಿಷ್ಯಗಳ ಚಿಂತೆ ..!


**ಸಂಜೆ ಮುದುಡುವ ಚಿಂತೆ ಇಲ್ಲದೆ, ಅರಳುವ ಹೂಗಳು..!


**ಮುಟ್ಟಿನ ದಿನ ಹತ್ತಿರ ಬಂದ ಶಾಲಾ ಹುಡುಗಿಗೆ. ಶನಿವಾರದ ಬಿಳಿ ಸ್ಕರ್ಟಿನ ಚಿಂತೆ ...!


** ಮನದ ಗೋರಿಯೊಳಗೆ ಹೂತು ಹಾಕಿದ್ದ ಕನಸುಗಳು ಮತ್ತೆ ಎದ್ದು ಬರದಂತೆ ಕಾದು ಕುಳಿತವು ನೆನಪುಗಳು ..

**ಕೆರೆಯ ನೀರಲ್ಲಿ ಕಲ್ಲೆಸೆದು ಅಲೆಯ ಉಂಗುರವನ್ನು ನೋಡುತ್ತಾ ಕುಳಿತ ಹುಡುಗನಿಗೆ, ತನ್ನ ಕೈಯಲ್ಲಿನ ಉಂಗುರ ಕಳೆದದ್ದೇ ಗೊತ್ತಿರಲಿಲ್ಲ .!


**ಭಾವನೆಗಳಿಗೆ ಆಣೆಕಟ್ಟು ಕಟ್ಟಿದೆ ಮನಸು ಮರುಭೂಮಿಯಾಯ್ತು,ಮಾತಿಗೆ ಮೌನದ ಫ್ರೇಮು ಹಾಕಿದೆ ಕಣ್ಣೀರಾಯ್ತು...!




**ಹಸಿ ಮಣ್ಣಿಗೂ,ಹಸಿ ಮನಸಿಗೂ ಎಲ್ಲಿಯ ಸಂಬಂಧ ? ಎರಡರಲ್ಲೂ ಹೆಜ್ಜೆ ಗುರುತುಗಳು ಮೂಡುವುದು ಬೇಗ ..!




**ಅದ್ಯಾರದೋ ಕನಸು ಉರಿದು ಉಲ್ಕೆಯಾಗಿ ಬೀಳುತ್ತಿರುವಾಗ ಹುಡುಗನೊಬ್ಬ ಕನಸೊಂದರ ನನಸಿಗಾಗಿ ಪ್ರಾರ್ಥಿಸುತ್ತಿದ್ದ ..!


**ಪಕ್ಕಾ ಪಾತರಗಿತ್ತಿಯಂತಿರುವ ಈ ಕನಸುಗಳು ..!


** ಅವಳ ನೆನಪಿನ ನಗು-ಅಳುವಿನ ಮೋಡಿಗೆ ಹುಡುಗನ ಮನದಲ್ಲೊಂದು ಕಾಮನ ಬಿಲ್ಲು ...!

** ಅದಾವುದೋ ಹಾಡಿನ ರಾಗದೊಂದಿಗೆ ಹುಡುಗಿ ನೆನಪಾಗುತ್ತಿದ್ದಾಳೆ ಅವನಿಗೆ, ಹಾಡಿನೆ ಸಾಲುಗಳೇ ಮರೆತುಹೋಗಿವೆ ಜೊತೆಗೆ ಹುಡುಗಿಯ ಮುಖವೂ ....!




ಅದ್ಯಾವ ಭಾವದಲ್ಲಿ ಬರೆದಿದ್ದೆ ನನಗೆ ಗೊತ್ತಿಲ್ಲ ಕೆಲವನ್ನು ಈಗ ಓದಿದರೆ ನನಗೆ ಅರ್ಥವಾಗ್ತಾ ಇಲ್ಲ .....!


ಹೆಚ್ಚಿನವು ಕ್ಲಾಸಿನಲ್ಲಿ ಕುಳಿತು ಬರೆದದ್ದು. ಅಷ್ಟೊಂದು ಶಕ್ತಿಯಿದೆಯಾ? ಈ ಬೋರ್ ಹೊಡಿಸೋ subjectsಗಳಿಗೆ? ಲೆಕ್ಚರರುಗಳಿಗೆ??

Monday, October 4, 2010

ಪ್ರೀತಿಸಿಕೊಂಡವರು ಸಿಗಬೇಕೆಂದೆನಿಲ್ಲ...



ಮೊನ್ನೆ ಗೆಳೆಯರೆಲ್ಲ ಒಟ್ಟಿಗೆ ಸೇರಿದ್ದವು. ಬರೀ ಹುಡುಗಿಯರೇ ಇದ್ದಿದ್ದರೆ dress,earing,shopping,bollywood gossip ಇವಿಷ್ಟೇ ವಿಷಯವಾಗಿರುತ್ತಿತ್ತೇನೋ, ಒಂದಿಷ್ಟು ಹುಡುಗರೂ ಇದ್ದರಲ್ಲ..ಅಯೋಧ್ಯೆ,ಪಂಚರಂಗಿ, ಎಲ್ಲಾಮುಗಿದಮೇಲೆ ವಿಷಯ ಹೊರಳಿದ್ದು ಪ್ರೀತಿಯ ಕಡೆಗೆ. ನನ್ನ ಆತ್ಮೀಯ ಗೆಳೆಯರೆಲ್ಲಒಂಥರಾ ಭಗ್ನಪ್ರೇಮಿಗಳೇ.!ಹುಡುಗಿಯ ನೆನಪಿನ ನೆಪದಲ್ಲಿ ಬಾರಲ್ಲಿ ಕುಳಿತು ಗುಂಡು ಹಾಕಿದವರೇ ..! ಕೆಲವರು ಹಳೆ ಹುಡುಗಿಯ 'ಹ್ಯಾಂಗ್ಓವರ್'ನಲ್ಲಿ ಇನ್ನೂ ಇದ್ದರೆ, ಇನ್ನು ಕೆಲವರು ಹೊಸ ಹುಡುಗಿಯ ಶೋಧದಲ್ಲಿ ಇರುವವರು..!

ಹಾಗೆ ಪ್ರೀತಿಯ ಬಗ್ಗೆ ಮಾತನಾಡ್ತಾ ಇರೋವಾಗ, 'ಶಿವೂ ಹುಡುಗಿ ಮದ್ವೆ ಅಂತೆ ಮಾರಾಯ್ತೀ...' ಎಂದ ಮನೋಜ್. LICA lab ನಲ್ಲಿ 5V ಶಾಕ್ ಹೊಡೆದ ಅನುಭವ ನನಗೆ...! ಅವರಿಬ್ಬರಿದ್ದದ್ದೇ ಹಾಗೆ, made for each otherಎಂಬಂತೆ. ಇದ್ರೆ ಅವರಿಬ್ರ ಥರ ಇರಬೇಕು ಅನ್ನೋವಷ್ಟು. 'ಹುಡ್ಗ ಕೂಲಾಗಿದಾನೆ .. ಏನು ಬಾಯ್ಬಿಡ್ತಾ ಇಲ್ಲ' ,ಅಂದ್ಬಿಟ್ಟ ಮನು, ಮುಂದೆ ಪ್ರಶ್ನೆಗಳಿಗೆ ಅವಕಾಶ ಕೊಡದೆ...


ಯಾಕೋ ಮಾತನಾಡಬೇಕು 'ಶಿವು' ಹತ್ರ ಅನಿಸಿಬಿಡ್ತು.ಮನೆಗೆ ಬಂದ ತಕ್ಷಣ ಫೋನ್ ಮಾಡಿದೆ."ನಿನ್ನ ಹತ್ರ ಅವತ್ತೇ ಮಾತಾಡಬೇಕು ಅನ್ಸಿತ್ತು sou. ಹುಡುಗಂಗೆ ಈಗನಾವೆಲ್ಲಾ ನೆನಪಾಗಿದೇವೆ ಅಂತ ಅಂದ್ಕೊಳ್ತೀರಾ ಎಂದು ಸುಮ್ನಿದ್ಬಿಟ್ಟೆ"ಅಂದ. "ಅದೆಲ್ಲ ಇರಲಿ ಬಿಡು ಏನಾಯ್ತುಅದನ್ನ ಹೇಳು" ಅಂದೆ. ಹುಡುಗ ಮಾತನಾಡ್ತಾ ಹೋದ..


"ಅವಳು ಬರೀ lover ಆಗಿದ್ದಿದ್ರೆ ಇಷ್ಟು ಹೊತ್ತಿಗೆ 'ಕೈ ಕೊಟ್ಟ ಹುಡುಗಿ' ಅಂತ ಹೇಳ್ಬಿಡ್ತಿದ್ನೇನೋ, she is one my best friends as you know. ನನ್ನ ಅವಳ ನಡುವೆ 'ಪ್ರೇಮ' ಅನ್ನೋದಕ್ಕಿಂತ 'ಪ್ರೀತಿ' ಜಾಸ್ತಿಇತ್ತು.ಜೊತೆಯಾಗಿಬಾಳುವ ಕನಸನ್ನು ಹೆಣೆದಿದ್ದೆವು ಬಿಡು ಅದು ಬೇರೆ ವಿಷಯ. ಮೊನ್ನೆ ಹುಡುಗಿ ಬಂದು ನನ್ನ ಕೈಹಿಡ್ಕೊಂಡು ನನ್ನಮದ್ವೆ ಕಣೋ ಅಂದಾಗ ಏನಂತ ಹೇಳಲಿ ಹೇಳು? she is a matured girl sou ಬದುಕನ್ನುನನಗಿಂತ ಇನ್ನೂಚೆನ್ನಾಗಿ ಅರ್ಥ ಮಾಡಿಕೊಂಡ ಹುಡುಗಿ . ನಾನು ದಾರಿತಪ್ಪಿದಾಗ್ಲೆಲ್ಲ ತಿದ್ದಿದಾಳೆ, ಕ್ಷಣ ಕ್ಷಣಕ್ಕೂಬದಲಾಗುವ ನನ್ನಮನೋಸ್ತಿತಿಯ ಅರ್ಥ ಮಾಡ್ಕೊಂಡು ನನ್ನ ಹತಾಶೆಗೆಲ್ಲ ಆಶಾ ಕಿರಣ ಆಗಿದ್ದಂಥವಳು .ಬದುಕಿನ ಕಷ್ಟಕರತಿರುವುಗಳಲ್ಲಿ ಸಾಥ್ ಕೊಟ್ಟಿದಾಳೆ.ನಂದಿನ್ನು settle ಆಗಿರದ ಬದುಕು. ಇನ್ನೆರಡು ವರ್ಷಕಾಯ್ತೀಯಾ? ಅಂತ ಹೇಗೆಕೇಳಲಿ? ಹೇಳು ... ಅದೆಲ್ಲ ಸರಿ ಕಣೆ ಪ್ರೀತಿ ಮಾಡಿದವರೆಲ್ಲ ಮದ್ವೆ ಆಗ್ಲೇ ಬೇಕು ಅಂತಇದ್ಯಾ? ಕನಸೆಲ್ಲನನಸಾಗಲೇ ಬೇಕಾ? 'ಕೈಗೆಟುಕದ ದ್ರಾಕ್ಷಿ ಹುಳಿ' ಅಂತ ಹೇಳ್ತಿಲ್ಲ..ಮೊದಲಿಂದಾನೂಅನ್ಕೊಂಡಿದ್ದೆ, ಆವಾಗವಾಗನಿನ್ ಹತ್ರಾನೂ ಹೇಳ್ತಿನಲ್ವಾ? ಬೇಜಾನ್ ಪ್ರೀತಿ ಮಾಡಿದವರನ್ನು ಮದ್ವೆ ಆಗ್ಬಾರ್ದೆಅಂತ. ಅವರು ಜೀವನದುದ್ದಕ್ಕೂಸಿಹಿ ನೆನಪಾಗಿ ಕಾಡ್ತಾನೆ ಇರ್ಬೇಕು ಅಂತ. ಅವಳು life ನಲ್ಲಿ ಬಂದಮೇಲೆಮರ್ತೆ ಹೋಗಿತ್ತು ಎಲ್ಲ..ಈಗ life ಮತ್ತೆನೆನಪುಮಾಡಿ ಕೊಟ್ಟಿದೆ ನನ್ನ ಹೇಳಿಕೆನ" ಅಂದ.. ! ಅದೇನೂ ಹೇಳಬೇಕುಅನಿಸಲೇ ಇಲ್ಲ. ಮೌನವಿದ್ದುಸಮ್ಮತಿಸಿದೆನೋ, ಅಥವಾ ಆ ಕ್ಷಣಕ್ಕೆ ಅದೇ ಸರಿಯಾಗಿ ಕಂಡಿತೋ ತಿಳಿಯಲಿಲ್ಲ.ಫೋನಿಟ್ಟ ನನ್ನಲ್ಲಿ ವಿಚಾರಗಳಸರಣಿ.


ಹೌದು ಸ್ನೇಹಿತರೇ ಬದುಕಿನ ವಿವಿಧ ಮಜಲುಗಳಲ್ಲಿ, ವಿವಿಧ ರೂಪಗಳಲ್ಲಿ ಹರಡಿಕೊಂಡಿರುವ 'ಪ್ರೀತಿ' ದೇವರುtimeತಗೊಂಡು ಸೃಷ್ಟಿಸಿದ ಒಂದು masterpiece.ಎಲ್ಲದ್ದಕ್ಕೂ ಒಂದೊಂದು ದೇವರಿರುವ ಗ್ರೀಕರಿಗೆ, 'aphrodite'ಪ್ರೀತಿಗೆ ಅಧಿದೇವತೆ.ಪ್ರೀತಿಗೆ ಅದೇನು ಬೇಕಾದರೂ ಮಾಡಿಸುವ ಶಕ್ತಿ ಇದೆಯಂತೆ (ದೊಡ್ಡೋರುಹೇಳ್ತಾರೆ).ಅಂದರೆ ಪ್ರೀತಿ ಒಂದು ಶಕ್ತಿ.ಸರಿನಾ? ಅಂದರೆ the law of conservation of energy (ಶಕ್ತಿಯಪರಿವರ್ತನೆಯನಿಯಮ)ಇದಕ್ಕೂ ಅನ್ವಯವಾಗಲೇ ಬೇಕು. ನಿಯಮ ಹೇಳುವುದೇನೆಂದರೆ, Energy can neither be created nor destroyed: it can only be transformed from one state to another. (ಶಕ್ತಿಯನ್ನುಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ: ರೂಪವನ್ನು ಬದಲಾಯಿಸಬಹುದಷ್ಟೇ.)


ಶುದ್ಧ ನಿಷ್ಕಲ್ಮಶಪ್ರೀತಿ, ಅದೊಂದು ಅನುಭೂತಿ. ಅನುಭವಿಸಿದವ ಪ್ರೀತಿಯನ್ನು ದೇವರೆಂದ.ಸಿಗದೇ ಇದ್ದವಪ್ರೀತಿ ನರಕವೆಂದ.ನಿಜಕ್ಕೂ ಪ್ರೀತಿಯೆಂದರೆ ಏನು ?ಇದೊಂದು ಉತ್ತರವಿದ್ದೂ ಹೇಳಲಾಗದ ವರ್ಣಿಸಲಾಗದ ಸ್ಥಿತಿ. ಅಥವಾಹಲವಾರುಉತ್ತರಗಳಿದ್ದು ಕೊನೆಗೆ ಶೂನ್ಯವೆನಿಸುವ ಭಾವವೇ ? ಅವರವರ ಭಾವಕ್ಕೆ ತಕ್ಕಂತೆ ಪ್ರೀತಿಯ definition ಬದಲಾಗುತ್ತಲೇ ಹೋಗುತ್ತದೆ.ನವಜಾತ ಮಗುವಿಗೆ ಪ್ರೀತಿಯೆಂದರೆ ಅಮ್ಮ ಅಷ್ಟೇ.! ಅದೇ ಮಗು ಬೆಳೆದಂತೆಲ್ಲಪ್ರೀತಿಯ ವ್ಯಾಖ್ಯಾನ ವಿಸ್ತಾರ ಪಡೆದುಕೊಳ್ಳುತ್ತಾ ಹೋಗುತ್ತದೆ.


ಅದೆಲ್ಲ ಇರಲಿ ಬಿಡಿ ಈಗ ನನ್ನ ಸ್ನೇಹಿತ ನನ್ನಲ್ಲಿ ಕೇಳಿ, ನನ್ನನ್ನು ಮೌನದ ಓಣಿಯಲ್ಲಿ ಬಿಟ್ಟ ಪ್ರಶ್ನೆಗೆ ನನ್ನದೇಆದರೀತಿಯಲ್ಲಿ ಉತ್ತರಿಸುತ್ತಿದ್ದೇನೆ. ಇದೇನು ಅನುಭವ ವಾಣಿಯಲ್ಲ. ನಾನೇನು ಅಷ್ಟು ಪ್ರೌಢಳೂ ಅಲ್ಲ. ಆದರೆಒಬ್ಬರಮನೋಸ್ಥಿತಿಯನ್ನು ಅರ್ಥೈಸಿಕೊಳ್ಳುವ,ಗೌರವಿಸುವ ಶಕ್ತಿಯು ನನ್ನಲ್ಲಿ ಇದೆ ಎಂದಷ್ಟೇ ಹೇಳಬಯಸುತ್ತೇನೆ.

ಪ್ರೀತಿ ಮನಸಿಗೆ ಸಂಬಂಧಿಸಿದ ವಿಷಯ.ಆ ಪ್ರೀತಿಯಲ್ಲಿ ಎಳಸುತನವಿರುತ್ತದೆ,ಮುಂದಿನದರ ಚಿಂತೆ ಮಾಡದೆ, ಈ ಕ್ಷಣಕ್ಕಾಗಿ ಬದುಕುತ್ತಾರೆ.ಆದರೆ ವಿಪರ್ಯಾಸವೆಂದರೆ ಆ ಪ್ರೀತಿ ಎಲ್ಲರಿಗೂ ಅದು ಸಿಗುವುದಿಲ್ಲ.ಸಿಕ್ಕಿದ್ದೇಆದರೆ ಅವನು/ ಅವಳು ಪುಣ್ಯವಂತರು.ಮನಸು ಪ್ರೌಢವಾದಂತೆಲ್ಲ ಚಿಂತೆ,ಚಿಂತನೆಗಳು ಹೆಚ್ಚಾಗಿ ಮುಗ್ಧತೆಯ ಚಿಪ್ಪಿನಿಂದ ಹೊರಬಂದುಜಗವನ್ನುನೋಡಿದಾಗ ಭವಿಷ್ಯದ ಯೋಚನೆಯು ಹೆಚ್ಚಾಗುತ್ತದೆ. ಮನದಲ್ಲಿ ಪ್ರೀತಿಯ ಜೊತೆಗೆ ಇನ್ನೊಂದಿಷ್ಟು ಭಾವಗಳು ಮೊಳೆತು, ಮನಸ್ಸನ್ನು ಕೊಚ್ಚೆಯನ್ನಾಗಿಸುತ್ತದೆ. ಅಲ್ಲಿಗೆ ಒಂದು ಮುಗ್ಧ ಪ್ರೀತಿ ಅನ್ಯಾಯವಾಗಿಸತ್ತಿರುತ್ತದೆ..!


ಒಂದು ಜೋಡಿ ( ಹುಡುಗ- ಹುಡುಗಿ)..! ಬೇಜಾನ ಪ್ರೀತಿಸಿರುತ್ತಾರೆ. ಅವರಿಬ್ಬರು ಅಲೆದಾಡದ ಜಾಗವಿಲ್ಲ,ನೋಡದಸಿನೆಮಾವಿಲ್ಲ, ತಿನ್ನದ ತಿಂಡಿಯಿಲ್ಲ ಮದುವೆಯೂ ನಡೆಯುತ್ತದೆ ಬಿಡಿ.(ಮೊನ್ನೆ ಗೆಳತಿಯೊಬ್ಬಳುಹೇಳುತ್ತಿದ್ದಳುಪ್ರೀತಿಸಿ ಮದುವೆಯಾದರೆ ಅಲ್ಲಿ ಆ ಪ್ರೀತಿಯ ಎಂಬುದರ ಕೊಲೆ ಆಗಿರುತ್ತದೆ ಎಂದು.) ಮೊದಲೆರಡು ವರ್ಷ ಸರಿ.ಅವರಷ್ಟು ಸುಖಿಷ್ಟರು ಯಾರೂ ಇಲ್ಲ ಎಂದರೂ ತಪ್ಪಲ್ಲ. ಪ್ರೀತಿಯ ದ್ಯೋತಕವಾಗಿ ಮಕ್ಕಳೂ ಆಗುತ್ತವೆ.ಮಕ್ಕಳಲಾಲನೆ-ಪೋಷಣೆ. ಅವರ ವಿದ್ಯಾಭ್ಯಾಸ. ಕೊನೆಗೆ ಅನ್ನಿಸಿಬಿಡಲೂಬಹುದು ಲೈಫು ಇಷ್ಟೇನಾ ? ಪ್ರೀತಿಎಂದರೆಇದಿಷ್ಟೇನಾ ?ಎಂದು ..


ಅದೇ ಒಂದು ಹುಡುಗ ಹುಡುಗಿ ಬೇಜಾನ ಪ್ರೀತಿ ಮಾಡಿಯೂ ಮದುವೆ ಆಗಲು ಸಾಧ್ಯವಾಗಲಿಲ್ಲ ಎಂದಿಟ್ಟುಕೊಳ್ಳೋಣ. ಸಿಗದ ಪ್ರೀತಿಯ ಬಗ್ಗೆ ಕನವರಿಕೆ ಜಾಸ್ತಿ ಅಲ್ಲವೇ? ಇರುವುದೆಲ್ಲವ ಬಿಟ್ಟುಸಿಗದಿರುವುದರಕಡೆಯೇ ತುಡಿತ ಹೆಚ್ಚು. (ಇದು ನಾವು normal human beings ಎನ್ನುವುದಕ್ಕೆ ಒಂದು ಪುಟ್ಟconfirmatory test ..! ಹ್ಹ ಹ್ಹ ಹ್ಹಾ ).ಹುಡುಗಿ/ಹುಡುಗ ಸಿಗಲಿಲ್ಲ ಎನ್ನುವುದೊಂದು ಕೊರಗು ಮನದ ಮೂಲೆಯೊಂದರಲ್ಲಿ ಇದ್ದೆ ಇರುತ್ತದೆ ಬಿಡಿ.ಕನಸುಕನಸಾಗಿದ್ದು ಕನವರಿಕೆಯನ್ನು ಬಿಟ್ಟು ಹೋಗಿರುತ್ತದೆ. ಪ್ರೀತಿಯನ್ನು ಪ್ರೀತಿಯಾಗೆ ಇರಲು ಬಿಟ್ಟು ಬಿಡಿ.ಜೀವನದ ಪಯಣದಲ್ಲಿ ಆ ಹುಡುಗ/ಹುಡುಗಿಯ ಹೆಸರನ್ನುಕೇಳಿದಾಗ ಮುಖದಲ್ಲೊಂದು ಮುಗುಳುನಗೆ ತಂತಾನೆಹಾದು ಹೋಗುತ್ತದೆ.

ಮುಂದೊಂದು ದಿನ ಪಾರ್ಕಲ್ಲಿ ಹೋಗಿ ಹಿಂದೆ ಅವಳೊಡನೆ/ಅವನೊಡನೆ ಕುಳಿತ ಕಲ್ಲು ಬೆಂಚುಗಳನ್ನುಸವರಿಬರಬಹುದು, ಅವಳ ಜೊತೆ ice-cream ತಿಂದ ಅಂಗಡಿಗೆ ಹೋಗಿ ನಿಮ್ಮ ಮೊಮ್ಮಕ್ಕಳ ಜೊತೆ, ಅವರಅಜ್ಜಿ/ಅಜ್ಜ(ನಿಮ್ಮ ಹೆಂಡತಿ/ಗಂಡ ) ಜೊತೆ ಹೋಗಿ ತಿಂದು ಬರಬಹುದು..ಅದೇ ಅವಳದ್ದೇ ಪರಿಮಳ ಬಂದಂಥ ಅನುಭವ,ಭ್ರಮೆ...ಎಲ್ಲಿದ್ದಿರಬಹುದು? ಹೇಗಿದ್ದಿರಬಹುದು? ಒಂಥರದ ಕುತೂಹಲ ಥೇಟ್ ನಿಮ್ಮಮೊಮ್ಮಕ್ಕಳಲ್ಲಿರುವಂತೆ .. ..!ನಿಮ್ಮ ಈ ಹೊಸ ಪರಿಗೆ ನಿಮಗೆ ನಗು. ನಿಮ್ಮ ಜೊತೆಗಾರ್ತಿಗೂ ಏನಾಗಿದೆ ಇವರಿಗೆಎಂದು ಒಂದು ಬಗೆಯ possessivness ಮೂಡಿದರೂ ಅಚ್ಚರಿಯಿಲ್ಲ ..!


ನೋಡಿ ಸ್ನೇಹಿತರೆ ನಮ್ಮ ಬದುಕನ್ನು ನಾವು ಹೇಗೆ ಕಾಣುತ್ತೇವೋ ಹಾಗೆ ಇರುತ್ತದೆ ಅಲ್ಲವೇ ? ಅದು ಬಿಟ್ಟುಹುಡುಗಿಸಿಗಲಿಲ್ಲವೆಂದು ''ದೇವದಾಸ್' ಆಗಿ ಬಾರಲ್ಲಿ ಸೆಟ್ಲಾಗಿ ಬಿಟ್ರೆ ಹೇಗೆ ಹೇಳಿ ? ಬದುಕು ತುಂಬಾ ಸುಂದರವಾಗಿದೆ. ನೀವುಪ್ರೀತಿಸಿದ ಹುಡುಗಿ ಸಿಗದಿದ್ದರೆ ಏನಂತೆ ಮನೆಯನ್ನು ಮನವನ್ನು ತುಂಬಲು ಇನ್ನೊಬ್ಬಳುಬಂದೇಬರುತ್ತಾಳೆ.ಎಲ್ಲೋ ಒಂದು ಮೆಸೇಜ್ ಓದಿದ ನೆನಪು 'जब तुम किसी को खुदा से मांगो और वो तुम को ना मिले तो समाज जावो की तुमे खुदा से कोयी ओर मांग चूका है..!'


ಭವಿಷ್ಯದ ಎಲ್ಲೋ ಒಂದು ದಿನ ನಿಮ್ಮ ಪ್ರೀತಿಯನ್ನು ಭೇಟಿಯಾಗುತ್ತೀರಿ ಎಂದಿಟ್ಟುಕೊಳ್ಳೋಣ.ಕೂದಲೆಲ್ಲಬೆಳ್ಳಗಾಗಿದೆ ಆಕೆಯದು, ನಿಮ್ಮ ಗುರ್ತು ಹಿಡಿಯುತ್ತವೆ ಕನ್ನಡಕದೊಳಗಿನ ಆಕೆಯ ಕಂಗಳು. ಅವಳ ಕೃತಕ ಹಲ್ಲುಗಳಲ್ಲಿ ಮಿಂಚುತ್ತದೆ, ಖುಷಿಯ ನಗು. ಮಾತುಗಳೇ ಬರಿದಾದಂತೆ ನಗು. ಕಣ್ಣುಗಳಲ್ಲೇ ಭಾವನೆಗಳವಿನಿಮಯ.ಅಷ್ಟರಲ್ಲಿ ಬಂದ ಹದಿಹರೆಯದ ಹುಡುಗನನ್ನು ಪರಿಚಯಿಸುತ್ತಾಳೆ ನಿಮಗೆ, My grand son.......ಅರೆರೆನಿಮ್ಮದೇ ಹೆಸರು.... ಅಜ್ಜಿ ಮತ್ತೊಮ್ಮೆ ಕಣ್ಣು ಮಿಟುಕಿಸುತ್ತಾಳೆ, ಕಾರಲ್ಲೇರಿ ಟಾ ಟಾ ಹೇಳುತ್ತಾ. ಅಜ್ಜನ ಕಣ್ಣಲ್ಲಿಹೊಸಮಿಂಚು, ತುಟಿಯಲ್ಲೊಂದು ತುಂಟನಗು ಪ್ರೀತಿ ಸಾರ್ಥಕ್ಯವನು ಪಡೆಯುವುದು ಇಲ್ಲೇ ಅಲ್ಲವೇ ?

Friday, October 1, 2010

ಮಾರಾಟಕ್ಕಿಟ್ಟಿರುವ ಕನಸುಗಳು....







ಕೆಲವು ದಿನಗಳ ಹಿಂದೆ ಸಿರ್ಸಿಗೆ ಹೊರಟಿದ್ದೆ ಒಬ್ಬಳೆ. ಕುಮಟಾ ಸಿರ್ಸಿ ಬಸ್ಸಿನಲ್ಲಿ. ಬೆಳಗಿನ ಸಮಯ, ಬಲಬದಿಯ ಕಿಟಕಿಯಂಚಿನ ಸೀಟು ಕೇಳಬೇಕೇ? ಪಕ್ಕದಲ್ಲಿ ಯಾರೂ ಇರಲಿಲ್ಲ (ಇದ್ದಿದ್ದರೆ ಮಾತಿರುತ್ತಿತ್ತು ). ಒಬ್ಬಂಟಿಯಾದಾಗ ಭಾವನೆಗಳೇ ನನ್ನ ಸಂಗಾತಿಗಳಾಗುವುದು ಮಾಮೂಲು. ನನಗಿಷ್ಟವಾಗುವ ರಸ್ತೆಗಳಲ್ಲಿ ಕುಮಟಾ-ಸಿರ್ಸಿ ರೋಡ್ ಕೂಡ ಒಂದು (ಮಂಗಳೂರು ವಿಶ್ವಮಂಗಳದ ರಸ್ತೆಯೂ ಬಹಳ ಇಷ್ಟವಾಗುತ್ತದೆ). ದ್ವಿಚಕ್ರ ವಾಹನದಲ್ಲಿ ಬಂದರೆ ಘಟ್ಟ ಇಳಿವಾಗಿನ ಮಜವೇ ಬೇರೆ. ರಸ್ತೆಯೊಂದು ಬಿಟ್ಟರೆ ಅಕ್ಕ ಪಕ್ಕವೆಲ್ಲ ಪ್ರಕೃತಿ ನಿರ್ಮಿತವಾದದ್ದು. ಹಸಿರು, ಮುಂಜಾವಿನ ಮಂಜಿನ ಮುಸುಕು, ಅಂಕು ಡೊಂಕಾಗಿ ಸಾಗುವ ರಸ್ತೆ, ಕನಸಂತೆ ಭಾಸವಾಗುವ ಪ್ರಕೃತಿ. ಮನಸೆಂಬ ಮಾಯವಿಗೆ ಇನ್ನೇನು ಬೇಕು ಕನಸು ಕಾಣಲು ? ಇದೇನು ಪ್ರವಾಸ ಕಥನವಂತೂ ಅಲ್ಲ. ನೀವು ತುಂಬಾ ಸಲ ಓಡಾಡಿರಬಹುದು ಈ ರೋಡಿನಲ್ಲಿ. ಪ್ರಕೃತಿಗೆ ನನ್ನ ಮನದ ಭಾವನೆಗಳ ಫ್ರೇಮು ಹಾಕಿದ್ದೇನೆ. ಕಂಡಂಥ ಮಾಮೂಲು ಘಟನೆಗಳಿಗೆ ಭಾವನೆಗಳದ್ದೆ ಕನ್ನಡಿ ಹಿಡಿದಿದ್ದೇನೆ. ಮನದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಕನಸಿನಂತೆ ಬಿಡಿಬಿಡಿಯಾಗಿ ಕಾಣುವ ಸಾಲುಗಳನ್ನು ಓದಿ ನೋಡಿ:




*ಕುಮಟಾದ ಉಪ್ಪಾರ ಕೇರಿಯ ಗಣಪತಿಯ ಮುಂದೆ ಹಾಕಿದ್ದ ಪೆಂಡಾಲು ಬಿಚ್ಚುತ್ತಿದ್ದ ಮುದುಕ, ಪಕ್ಕದಲ್ಲೇ ನಿಂತು ಸಹಾಯವನ್ನೂ ಮಾಡದೆ ಹುಡುಗಿಯರ ನೋಡುತ್ತಾ ಹಲ್ಲು ಕಿಸಿಯುತ್ತಿದ್ದ ಯುವಕ..!


*ವಾಹನಗಳ ಸದ್ದಿಗೆ ಕಿವಿಮುಚ್ಚಿಕೊಂಡು ಪಕ್ಕಾ ಆಳಸಿಯಂತೆ ಬಿದ್ದಿರುವ ರಸ್ತೆಯನು ಗುಡಿಸುತ್ತಿರುವ ಹೆಂಗಸು, ಅದೀಗ ತಾನೆ ಅಂಗಡಿ ತೆರೆದು ಕಡ್ಡಿ ಗೀರುತ್ತಿರುವ ಗೂಡಂಗಡಿಯ ಮಾಲೀಕ.


*ಬೆಳೆದು ದೊಡ್ಡವಳಾಗಿ ಹಸಿರಾಗುವ ಹಂಬಲದಲ್ಲಿದ್ದಂತೆ ತೋರುವ ರಸ್ತೆಯ ಬದಿಯ ಗಿಡದ ಕೆಂಪು ಚಿಗುರು.


*ಬಟಾ ಬಯಲಾಗಿ ಮಲಗಿದ ಕಳೆ ತುಂಬಿಕೊಂಡು ಅಸ್ತವ್ಯಸ್ತವಾಗಿರುವ ಗದ್ದೆ. ಪಕ್ಕದಲ್ಲೇ ಹಾಳು ಸೋರುತ್ತಿರುವ ಮಾಳ ( ಗದ್ದೆ ಕಾಯಲು ಮಾಡಿರುವ ಸಣ್ಣ ಜೋಪಡಿ). ಮನದೊಳಗೆ ಅದೇನೋ ಕಳವಳದ ಭಾವ.


*ಬೃಹತ್ ಮರದ ಅಗಲ ಉದ್ದಗಳನ್ನು ಅಳೆವಂತೆ ಮರವ ಸುತ್ತಿಕೊಂಡಿರುವ ಅದಾವುದೋ ಕಾಡು ಬಳ್ಳಿ. ಹೂ ಬಳ್ಳಿ ನೀನಾಗು ಅರಳಿ ಮರದಲಿ ತೂಗು, ನಾನೇ ಮಾಮರವಾಗಿ ಮೆರೆಯಲೇನು... ಎಂಬ ಭಾವಗೀತೆಯೊಂದರ ಸಾಲನ್ನು ತಂತಾನೇ ಗುನುಗಿಕೊಂಡ ಮನಸು.


*ಪಕ್ಕದ ಬಂದಳಕ (ಪರಾವಲಂಬಿ ಗಿಡ) ಹಿಡಿದು ಬತ್ತುತ್ತಿರುವ ಮರದ್ದೇ ಚಿಂತೆಯಲ್ಲಿರುವಂತೆ ತೋರುವ ಗೆದ್ದಲು ಹಿಡಿದು ಹಾಳಾದ ಮರದ ಬೊಡ್ಡೆ..!


*ಕಾಡು ಹೂವೊಂದರ ಮಕರಂದವ ಹೀರುವ ಗಡಿಬಿದಿಯಲ್ಲಿರುವ ದುಂಬಿ.


*ಗಿಡಗಳ ಎಲೆಯ ಮೇಲಿರುವ ನೀರಹನಿಯಲ್ಲಿ ತನ್ನ ಬಿಂಬ ನೋಡುವ ಹಂಬಲದಲ್ಲಿರುವ ಸೂರ್ಯ ರಶ್ಮಿ.


*ಹುಚ್ಚು ಮಳೆಗೆ ಹುಚ್ಚೆದ್ದು, ಕಡಲ ಸೇರುವ ಧಾವಂತದಲ್ಲಿ ಬೆಳ್ಳಿ ನೆರಿಗೆಯ ಚಿಮ್ಮಿಸುತ್ತಾ ಸಾಗುತ್ತಿರುವ ಝರಿ ..! ರಸ್ತೆಯ ಬದಿಗೆಲ್ಲ ತಾತ್ಕಾಲಿಕ ಜೋಗವನ್ನು ನಿರ್ಮಿಸುವ ಮಳೆರಾಯನ ಲೀಲೆಗೆ ಮೆಚ್ಚಿಕೊಂಡ ಮನಸು.


*ಕಣ್ಮುಚ್ಚಿ ಸುರಿದ ಮಳೆಗೆ ಚಳಿಯೆದ್ದು, ಹಸಿರ ಚಾದರ ಹೊದ್ದು ಮಲಗಿರುವ ಭೂರಮೆ ..!


*ಅದ್ಯಾವುದೋ ಊರಿಗೆ ಹೋಗುವ ಕಾಲು ಹಾದಿಯಲಿ ದನಗಳ ಹಿಂಡಿನ ಹಿಂದೆ ಹೊರಟ ಪೋರನ ಕೈಯಲ್ಲಿ ಒಡತಿ ಕೊಟ್ಟ ಚಕ್ಕುಲಿ..!


*ಅದೆಲ್ಲಿ ಮಳೆಹನಿಸಲಿ ಎಂಬ confusionನಲ್ಲಿ ಇದ್ದಂತೆ ಕಂಡ, ಘಳಿಗೆಗೊಮ್ಮೆ ವೇಷ ಬದಲಿಸುವ ಕಾರ್ಮೋಡದ ತುಂಡು.


*ದಾರಿ ಪಕ್ಕ ನಿಂತು ವಾಹನಗಳ ಗಣತಿ ಮಾಡುವಂತೆ ಕಾಣುವ OFC (Optical Fiber Cable)ಯ ಬೋರ್ಡುಗಳು.


*ದಟ್ಟ ಕಾನನದಲ್ಲಿ ಹರಿವ ಹಳ್ಳವೊಂದರಲ್ಲಿ ಮೀನು ಹಿಡಿಯಲು ದೃಷ್ಟಿ ನೆಟ್ಟಿರುವ ಮಿಂಚುಳ್ಳಿ(Kingfisher), ಹಿಡಿದಿದ್ದು ನೋಡಬೇಕಿತ್ತು ಅಂದುಕೊಂಡ ಮನಸು, ಬಸ್ಸಿನೊಂದಿಗೆ ಮುಂದೆ ಸಾಗಿದ ದೇಹ..!


*ಬಾನಲ್ಲಿ ಬಿಳಿ-ಕರಿ ಮೋಡಗಳ ತಕಧಿಮಿ, ಅದೆಲ್ಲೋ ಕಾಣುವ ನೀಲಾಕಾಶ ಅದಕ್ಕೆ ಯಾವುದಾದರೊಂದು ಆಕಾರದ ಹೋಲಿಕೆ ಕೊಡುವ ಹಂಬಲದಲ್ಲಿದ್ದ ಮನಸು.


*ಚಪ್ಪಲಿರಹಿತ ಪಾದಗಳ ಹೆಜ್ಜೆ ಗುರುತಿಗಾಗಿ ಕಾದು ಕುಳಿತಂತೆ ಕಾಣುವ ಹಸಿಮಣ್ಣು ..!


*ರೋಡಿನಲ್ಲಿಯ ಹೊಂಡಗಳ ಪ್ರಭಾವದಿಂದ 'Tap dance' ಮಾಡುತ್ತಿರುವ ಬಸ್ಸಿನ ಕಿಟಕಿಯ ಗಾಜುಗಳು.!


*20 ರ ಆಸುಪಾಸಿನ ತರುಣಿ ಅವಳ ಬೆನ್ನಿಗೆ ಆರಾಮವಾಗಿ ಮಲಗಿರುವ ಅವಳ ಉದ್ದನೆಯ ಜಡೆಯ ಮೇಲೆ ನನ್ನ ಕಣ್ಣು. ಕುತ್ತಿಗೆಗೆ ಕಚಕುಳಿಯಿಡುತ್ತಿರುವ ನನ್ನ ಜುಟ್ಟಿನ ಮೇಲೆ ಅವಳ ಕಣ್ಣು ..!



*ಅದಾವುದೋ ಅಡ್ರೆಸ್ಸ್ ಹೇಳಲು ತಿಣುಕಾಡುತ್ತಿರುವ ನಿರ್ವಾಹಕ. 'ಗಂಧರ್ವ ಬಾರ್ ' ಎಂದೊಡನೆ ತಿಳಿದುಕೊಂಡ ಪ್ರಯಾಣಿಕ..!


* ತಲೆಯ ಮೇಲಿನ ಖಾಲಿ ಜಾಗವನ್ನು ಮುಚ್ಚಲು. ಮಳೆಗಾಲದಲ್ಲೂ ಡೆನಿಮ್ ಕ್ಯಾಪ್ ಹಾಕಿಕೊಂಡಿದ್ದ ಯುವಕ..!


*ಸರಗೋಲನ್ನು ಅನಾಯಾಸವಾಗಿ ಜಿಗಿದು ತೋಟಕ್ಕೆ ಜಿಗಿದ ದನ. ಎತ್ತು ಇರಬಹುದೆಂದು ಕುತೂಹಲ ತಡೆಯಲಾಗದೆ ತಿರುಗಿ ನೋಡಿದರೆ ಅದು ಆಕಳು..!


*ಹಠ ಮಾಡುತ್ತಾ ಕೆನ್ನೆಯ ಮೇಲೆ ಅಲೆದಾಡುವ ಮುಂಗುರುಳುಗಳು, ಯಾರದೋ ನೆನಪಾಗಿ ನಗುವ ಹುಡುಗಿಯ ಕೆನ್ನೆಯ ಮೇಲೆ ಮೂಡುವ ಗುಳಿ. .!


*ಅಮ್ಮ ಹೆಣೆದುಕೊಟ್ಟ ಎರಡು ಜಡೆಗೆ ಎರಡು ಡೇರೆ ಹೂವು ಮುಡಿದು ಜಂಭದಿಂದ ಹೆಜ್ಜೆ ಹಾಕುತ್ತಿರುವ ಕನ್ನಡ ಶಾಲೆಯ ಹುಡುಗಿ, ನೆನಪಾದ ನನ್ನ ಶಾಲಾ ದಿನಗಳು..!


ಹೀಗೆ ಸಮಯದ ಜೊತೆಗೆ ಓಡುತ್ತಿದ್ದ ಬಸ್ಸಿನಲ್ಲಿ cell phonenalli ನಾನು ಇದೆಲ್ಲ ಬರೆಯುತ್ತಿದ್ದೆ. ಅದೇನು ಅಂದುಕೊಂದರೋ ನೋಡಿದ ಜನರು, ನನಗಾವ ಪರಿವೆಯಿರಲಿಲ್ಲ. ಸುಮ್ಮನೆ ಸುತ್ತಲಿನ ಆಗು ಹೋಗನ್ನು ಕುತೂಹಲದ ಕನ್ನಡಕದೊಳಗೆ ನೋಡುತ್ತಲಿದ್ದರೆ. ಮನಸು ಅದನ್ನು ಶಬ್ದದ ರೂಪದಲ್ಲಿ ಹಿಡಿದಿಡುತ್ತಲಿತ್ತು. ಕೈ ಬರಹಕ್ಕೆ ಇಳಿಸುತ್ತಲಿತ್ತು. ಸಿರ್ಸಿ ಬಸ್ಸ್ಟ್ಯಾಂಡ್ ಬಂದದ್ದೆ ತಿಳಿಯಲಿಲ್ಲ. ನನ್ನಷ್ಟಕ್ಕೆ ನಾನು ನಗುತ್ತಿದ್ದೆ. ನಗುವಿಗೆ ಕಾರಣವೇ ತಿಳಿಯಲಿಲ್ಲ. ಅಥವಾ ಇರಲಿಲ್ಲವೋ ಗೊತ್ತಿಲ್ಲ. .!